ಬೆಂಗಳೂರು:ವಿಧಾನ ಪರಿಷತ್(ಎಂಎಲ್‌ಸಿ) ಸ್ಥಾನವನ್ನು ಬೆಂಗಳೂರಿನಲ್ಲಿ ಇದ್ದವರಿಗೆ ಕೊಟ್ಟರೆ ಪಕ್ಷಕ್ಕೆ ಅನುಕೂಲ ಆಗುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಬುಧವಾರ ಮಾತನಾಡಿದ ಅವರು, ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯಲಿರುವ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, "ಎಂಎಲ್‌ಸಿ ಸ್ಥಾನ ನಮಗೆ ಸಿಗಬೇಕು. ಉತ್ತರ ಕರ್ನಾಟಕ ಭಾಗಕ್ಕೆ ಕೊಟ್ಟರೆ ಪಕ್ಷ, ಸಮುದಾಯಕ್ಕೆ ಅನುಕೂಲ ಆಗುತ್ತೆದ. ಕನಿಷ್ಠ ಎರಡು ಪರಿಷತ್ ಸ್ಥಾನವನ್ನಾದರೂ ನಮಗೆ ಕೊಡಬೇಕು. ಹೆಚ್ಚು ಗ್ರಾಮೀಣ ಪ್ರದೇಶಕ್ಕೆ ಟಿಕೆಟ್ ಕೊಡಬೇಕೆಂದು ಕೇಳಿದ್ದೇವೆ" ಎಂದರು.
ಹೆಚ್‌ಡಿಕೆ ಫೋನ್ ಕದ್ದಾಲಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, "ಕೇಂದ್ರದಲ್ಲಿ ಬಿಜೆಪಿಯವರದ್ದೇ ಸರ್ಕಾರ ಇದೆಯಲ್ಲ, ತನಿಖೆ ಮಾಡಬಹುದಲ್ವಾ?. ಇದರಲ್ಲಿ ರಾಷ್ಟ್ರೀಯ ಭದ್ರತಾ ವಿಚಾರ ಬರುತ್ತದೆ. ಕದ್ದಾಲಿಕೆ ಮಾಡಿದ್ದರೆ ತನಿಖೆ ನಡೆಸಲಿ, ಬೇಡ ಅಂದವರಾರು" ಎಂದು ಪ್ರಶ್ನಿಸಿದರು.
ಕರ್ನಾಟಕದಿಂದ ಪ್ರಧಾನಿ ರೇಸ್ನಲ್ಲಿ ಯಾರೂ ಇಲ್ಲ ಎಂಬ ಸಿಎಂ ಹೇಳಿಕೆಗೆ, "ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ನಮ್ಮಲ್ಲೂ ಪ್ರಧಾನಿ ಹುದ್ದೆಗೆ ಸಮರ್ಥರಿದ್ದಾರೆ. ಸಿಎಂ ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಇಂಡಿಯಾ ಮೈತ್ರಿಕೂಟ ಕೇಂದ್ರದಲ್ಲಿ ಹೆಚ್ಚಿನ ಸ್ಥಾನಗಳಿಸುವ ವಿಶ್ವಾಸವಿದೆ. ಹೆಚ್ಚು ಸ್ಥಾನ ನಮಗೆ ಬಂದರೆ ಪ್ರಧಾನಿ ಹುದ್ದೆಯನ್ನು ನಾವು ಕ್ಲೇಮ್ ಮಾಡುತ್ತೇವೆ" ಎಂದರು.
ಸಮರ್ಥರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಬೇಕು:"ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸಮರ್ಥರಿಗೆ ಕೊಡಬೇಕು. ಮುಂದಿನ ನಾಲ್ಕು ವರ್ಷ ಪಕ್ಷವನ್ನು ಸಂಘಟಿಸುವವರಿಗೆ ನೀಡಬೇಕು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗದವರು ಅಂತೇನಿಲ್ಲ. ಸಮರ್ಥವಾಗಿ ಮುನ್ನಡೆಸುವವರಿಗೆ ಅವಕಾಶ ನೀಡಬೇಕು. ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ" ಎಂದರು.