ಮೈಸೂರು:ಅಂತಾರಾಷ್ಟ್ರೀಯ ಪ್ರಸಿದ್ಧಿಯ ಸರೋದ್ ವಾದಕ ಪಂ.ರಾಜೀವ ತಾರಾನಾಥ್ (92) ಅವರು ಮಂಗಳವಾರ ಸಂಜೆ 6.30ಕ್ಕೆ ಮಣಿಪಾಲ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು.
ಅಂತಿಮ ದರ್ಶನ: ಬುಧವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕುವೆಂಪುನಗರದ ಜ್ಞಾನ ಗಂಗಾ ಶಾಲೆ ಹತ್ತಿರದ ಅವರ ಮನೆಯೆದುರು ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ 2 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.
ಮೈಸೂರಿನಲ್ಲಿ ವಾಸ: ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ವಿಶ್ವಶ್ರೇಷ್ಠ ಸರೋದ್ ವಾದಕರಲ್ಲಿ ಒಬ್ಬರಾಗಿದ್ದ ರಾಜೀವ್ ತಾರಾನಾಥ್ 1932ರ ಅಕ್ಟೋಬರ್ 17ರಂದು ಜನಿಸಿದ್ದರು. ಮೈಸೂರಿನಲ್ಲಿ ವಾಸವಿದ್ದರು. ಇವರ ಸರೋದ್ ವಾದನಕ್ಕೆ ಪ್ರಪಂಚದಾದ್ಯಂತ ಅಸಂಖ್ಯಾತ ಅಭಿಮಾನಿಗಳಿದ್ದಾರೆ.
ಬೆಂಗಳೂರು ಸೆಂಟ್ರಲ್ ಕಾಲೇಜ್ನಲ್ಲಿ ಬಿ.ಎ.ಆನರ್ಸ್ ಪದವಿಯನ್ನು ಮೊದಲ ಶ್ರೇಯಾಂಕದಲ್ಲಿ ಗಳಿಸಿದ್ದರು. ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಇಂಗ್ಲಿಷ್ನಲ್ಲಿ ಚಿನ್ನದ ಪದಕ ಪಡೆದಿದ್ದರು. ಪ್ರೊ.ಸಿ.ಡಿ.ನರಸಿಂಹಯ್ಯ ಮಾರ್ಗದರ್ಶನದಲ್ಲಿ "ಇಮೇಜ್ ಇನ್ ಪೊಯಿಟ್ರಿ ಆಫ್ ಟ.ಎಸ್.ಎಲಿಯೆಟ್" ಕುರಿತು ಪ್ರಬಂಧ ಮಂಡಿಸಿ ಮೈಸೂರು ವಿವಿಯಿಂದ ಪಿಹೆಚ್ಡಿ ಪದವಿ ಪಡೆದಿದ್ದರು.
ಉಪನ್ಯಾಸಕರಾಗಿ ವೃತ್ತಿ ಆರಂಭ: ರಾಯಚೂರಲ್ಲಿ ಅವರ ತಂದೆ ಕಟ್ಟಿದ ಹಮ್ ದರ್ದ ಕಾಲೇಜಿನಲ್ಲಿ ಉಪನ್ಯಾಸಕರಾಗಿ (1963) ವೃತ್ತಿ ಆರಂಭಿಸಿದ್ದ ಇವರು ಬಳಿಕ ಧಾರವಾಡದ ಕರ್ನಾಟಕ ಕಾಲೇಜು (1964), ಮೈಸೂರು ರಿಜಿನಲ್ ಕಾಲೇಜ್ ಆಫ್ ಎಜುಕೇಷನ್ (1965-68), ತಿರುಚ್ಚಿಯ ರೀಜನಲ್ ಕಾಲೇಜ್ ಆಫ್ ಎಜುಕೇಷನ್ (1968-74), ಹೈದರಾಬಾದ್‌ನ ಸೆಂಟ್ರಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರೀನ್ ಲಾಂಗ್ವೇಜಸ್ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು, ಯೆಮನ್ ದೇಶದ ಏಡನ್ (1980) ಇಂಗ್ಲಿಷ್ ಅಧ್ಯಾಪಕರಾಗಿ, ಪುಣೆಯ ಫಿಲ್ಮ್ ಇನ್ಸ್‌ಸ್ಟಿಟ್ಯೂಟ್ ಸಿನಿಮಾ ಸಂಗೀತ ವಿಭಾಗದ ಪ್ರಾಧ್ಯಾಪಕರಾಗಿಯೂ (1981-82) ಕಾರ್ಯನಿರ್ವಹಿಸಿದ್ದಾರೆ.