ಬೆಳಗಾವಿ:ದೈತ್ಯ ಬ್ರಿಟಿಷ್ ಸಾಮ್ರಾಜ್ಯವು ಕೆಚ್ಚೆದೆಯ ಕಿತ್ತೂರು ಸಂಸ್ಥಾನದ ಈ ಸೇನಾ ದಂಡನಾಯಕನ ಕಂಡರೆ ಬೆಚ್ಚಿ ಬೀಳುತ್ತಿತ್ತು. ಈತನ ರಣತಂತ್ರಕ್ಕೆ ಕನಸಿನಲ್ಲೂ ಕನವರಿಸುತ್ತಿದ್ದರು. ಆಂಗ್ಲರ ಪಾಲಿಗೆ ಸಿಂಹಸ್ವಪ್ನನಾಗಿ, 200ನೇ ಕಿತ್ತೂರು ವಿಜಯೋತ್ಸವ ಪ್ರಮುಖ ರೂವಾರಿಯೂ ಆಗಿದ್ದ ಸರ್ದಾರ್ ಗುರುಸಿದ್ದಪ್ಪ ಕಿತ್ತೂರಿನ ವೀರರಲ್ಲೇ ಅಗ್ರಗಣ್ಯ ಮತ್ತು ಅಗ್ರಮಾನ್ಯ. ಸ್ವಾಮಿ ನಿಷ್ಠೆ, ನಾಡಪ್ರೇಮ, ಕರ್ತವ್ಯಪ್ರಜ್ಞೆಗೆ ಮತ್ತೊಂದು ಹೆಸರು ಸ್ವಾಭಿಮಾನಿ ಗುರುಸಿದ್ದಪ್ಪ. ಇಂಥ ಧೀರ-ಶೂರನಿಗೆ ಇತಿಹಾಸದಲ್ಲಿ ಸಿಗಬೇಕಾದ ಗೌರವ, ಪ್ರಚಾರ ಸಿಗದೇ ಇರುವುದು ವಿಪರ್ಯಾಸದ ಸಂಗತಿ.
ಹೌದು, ಸರ್ದಾರ್ ಗುರುಸಿದ್ದಪ್ಪ ಕಿತ್ತೂರು ಸಂಸ್ಥಾನದ ಪ್ರಧಾನಿ, ಸೇನಾಧಿಪತಿ, ವೀರರಾಣಿ ಚನ್ನಮ್ಮನ ನೆಚ್ಚಿನ ಸೇನಾನಿ. ಈತನ ಕೈಯಲ್ಲಿ ಬಂದೂಕು ಇತ್ತು, ಬಿಚ್ಚುಗತ್ತಿಯೂ ಇತ್ತು. ಆಂಗ್ಲರ ವಿರುದ್ಧ ನಡೆದ ಎರಡೂ ಯುದ್ಧಗಳಲ್ಲಿ ಅಧಿಪತ್ಯವನ್ನು ವಹಿಸಿಕೊಂಡಿದ್ದು ಇದೇ ಧೀರ. ಥ್ಯಾಕರೆ ವಿರುದ್ಧ ಮುಖಾಮುಖಿಯಾಗಿ ಹೋರಾಡಿದವ. "ಸತ್ತರೆ ಸ್ವರ್ಗ ಗೆದ್ದರೆ ಸ್ವರಾಜ್ಯ" ಎಂಬ ಘೋಷವಾಕ್ಯದೊಂದಿಗೆ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಬಿಚ್ಚಗತ್ತಿ ಚನ್ನಬಸಪ್ಪ, ಗಜವೀರ, ಅವರಾದಿ ವೀರಪ್ಪ ಸೇರಿ ಇಡೀ ಸೈನ್ಯವನ್ನೆ ಹುರಿದುಂಬಿಸಿ, ಮಾರ್ಗದರ್ಶನ ನೀಡುತ್ತಿದ್ದ ಸೇನಾ ದಂಡನಾಯಕ. ಗುರುಸಿದ್ದಪ್ಪನ ಕೇಳದೇ ರಾಣಿ ಚನ್ನಮ್ಮ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಇದರಿಂದ ಗುರುಸಿದ್ದಪ್ಪನಿಗೆ ಕಿತ್ತೂರಿನಲ್ಲಿ ಎಷ್ಟು ಪ್ರಾಮುಖ್ಯತೆ ಇತ್ತು ಎಂಬುದು ತಿಳಿಯುತ್ತದೆ.
ರಕ್ತದೇವತೆಗೆ ರಣರಂಗದಲ್ಲಿಯೇ ಕೊನೆಯ ರಕ್ತತರ್ಪಣಗೈಯಲು ಸಿದ್ಧರಾಗುವಂತೆ ಗುರುಸಿದ್ದಪ್ಪ ನೀಡಿದ ಕರೆಗೆ ಓಗೊಟ್ಟು ಸಾಮಾನ್ಯ ಜನರು ಕೂಡ ಆಂಗ್ಲರ ವಿರುದ್ಧ ತೊಡೆ ತಟ್ಟಿದ್ದು, ಭಾರತೀಯ ಇತಿಹಾಸದಲ್ಲೆ ಮೊದಲು. ಗುಂಡಿನ ಸಪ್ಪಳ, ಖಡ್ಗಗಳ ಖಣ್ ಖಣ್ ಶಬ್ದ, ಹರ ಹರ ಮಹಾದೇವ ಘೋಷಣೆ, ರಣಭೂಮಿಯಲ್ಲಿ ಹಾರುತ್ತಿರುವ ಕೆಂಪುಧೂಳು, ಕಿಲ್ಲೇದ ಮೇಲಿನ ನಂದಿ ಧ್ವಜದ ಹಾರಾಟಗಳಿಂದ ಯುದ್ಧಭೂಮಿಯಲ್ಲಿ ಕಿತ್ತೂರು ರಾಜಲಕ್ಷ್ಮಿಗೆ ಜಯ ಖಚಿತ ಎಂದು ಆತ್ಮವಿಶ್ವಾಸ ತುಂಬುತ್ತಿದ್ದರು. ಕಿತ್ತೂರು ಮಣ್ಣಿಗಾಗಿ ಎಂಥ ಗಂಡಾಂತರ ಬಂದರೂ ಜೀವ ಕೊಡಲು ಸಿದ್ಧನಾಗಿದ್ದ ಅಪ್ರತಿಮ ಹೋರಾಟಗಾರ. ಕೊಟ್ಟ ಮಾತಿನಂತೆ ಕಿತ್ತೂರಿಗಾಗಿ ತನ್ನ ಜೀವವನ್ನೆ ಬಲಿ ಕೊಟ್ಟ ವೀರ ಎಂದು ಜಾನಪದ ವಿದ್ವಾಂಸ, ಇತಿಹಾಸಕಾರ ಡಾ.ಸಿ.ಕೆ.ನಾವಲಗಿ ತಮ್ಮ "ಕಿತ್ತೂರ ಸಂಸ್ಥಾನ ಜನಕಥನದ ಅನುಸಂಧಾನ" ಕೃತಿಯಲ್ಲಿ ದಾಖಲಿಸಿದ್ದಾರೆ.
ಈ ಬಗ್ಗೆ ಜಾನಪದ ವಿದ್ವಾಂಸ, ಇತಿಹಾಸಕಾರ ಡಾ.ಸಿ.ಕೆ.ನಾವಲಗಿ ಮಾತನಾಡಿ, ''1824ರ ಮೊದಲ ಯುದ್ಧದಲ್ಲಿ ಕಿತ್ತೂರಿನ ಸೈನಿಕರಲ್ಲಿ ರಾಣಿ ಚನ್ನಮ್ಮ ಸ್ವಾಭಿಮಾನ ಮತ್ತು ಸ್ಫೂರ್ತಿ ತುಂಬಿದರೆ, ಗುರುಸಿದ್ದಪ್ಪ ಸ್ವಾಮಿನಿಷ್ಠೆ, ಕರ್ತವ್ಯಪ್ರಜ್ಞೆ ಮತ್ತು ನಾಡಪ್ರೇಮವನ್ನು ಜಾಗೃತಗೊಳಿಸಿದ. 100 ಕುದುರೆ ಸವಾರರ ಪಡೆಯೊಂದಿಗೆ ಕಿತ್ತೂರು ಕೋಟೆ ಮೇಲೆ ಥ್ಯಾಕರೆ ದಂಡೆತ್ತಿ ಬಂದ. ಆಗ ಥ್ಯಾಕರೆ ಧೂತನ ಮೂಲಕ ಕೋಟೆಯ ಬಾಗಿಲು ತೆರೆಯುವಂತೆ ಕೊನೆಯ ಬಾರಿ ಹೇಳಿ ಕಳುಹಿಸುತ್ತಾನೆ. ಇದಕ್ಕೆ ಜಗ್ಗದ ಗುರುಸಿದ್ದಪ್ಪ ಕೋಟೆಯ ದ್ವಾರದ ಎದುರು ನಿಲ್ಲಿಸಿದ ಬ್ರಿಟಿಷ್ ಸೈನ್ಯವನ್ನು ದೂರ ಹಿಂದಕ್ಕೆ ಸರಿಸದ ವಿನಃ ಕೋಟೆ ಬಾಗಿಲುಗಳನ್ನು ತೆರೆಯುವುದಿಲ್ಲ ಎಂದು ಪ್ರತ್ಯುತ್ತರ ನೀಡುತ್ತಾರೆ'' ಎಂದು ತಿಳಿಸಿದರು.
''ಇದರಿಂದ ಮತ್ತಷ್ಟು ಕೆರಳಿದ ಥ್ಯಾಕರೆ ಇನ್ನು 1 ಗಡಿ(24 ನಿಮಿಷ)ಯಲ್ಲಿ ಕೋಟೆಯ ಬಾಗಿಲು ತೆರೆಯದಿದ್ದರೆ ತೋಪಿನಿಂದ ಬಾಗಿಲು ಒಡೆಯುವುದಾಗಿ ಕೊನೆಯ ಎಚ್ಚರಿಕೆ ನೀಡುತ್ತಾನೆ. ಇದಕ್ಕೂ ಅಳುಕದ ಗುರಸಿದ್ದಪ್ಪ ತನ್ನ ಸೇನೆಗೆ ಸಜ್ಜಾಗುವಂತೆ ಕರೆ ನೀಡುತ್ತಾನೆ. 24 ನಿಮಿಷ ಮುಗಿಯಲು ಒಂದು ಕ್ಷಣ ಮಾತ್ರ ಇರುವಾಗಲೇ ಕೋಟೆಯ ಬಾಗಿಲು ಒಳಗೆ ತೆಗೆಯುವ ಬದಲು ಹೊರಗೆ ತೆಗೆದವು. ಗುರುಸಿದ್ದಪ್ಪನ ನಿರ್ದೇಶನದಂತೆ ಕಿತ್ತೂರ ಸೈನಿಕರ ಕುದುರೆಗಳು ಮಿಂಚಿನ ವೇಗದಿಂದ ಬ್ರಿಟಿಷರ ಮೇಲೆ ನುಗ್ಗಿದವು. ಮತ್ತೊಂದು, ಸೈನ್ಯಕ್ಕೆ ಸ್ವತಃ ಚೆನ್ನಮ್ಮ ಕೋಟೆಯ ಮೇಲೇರಿ ಮಾರ್ಗದರ್ಶನ ಮಾಡುತ್ತಿದ್ದಳು. ಇವರ ಸೂಕ್ತ ನಿರ್ದೆಶನದಂತೆ ಕಿತ್ತೂರ ಕಲಿಗಳು ಬ್ರಿಟಿಷರ ರುಂಡ ಚೆಂಡಾಡಿದರು. ಕ್ಯಾಪ್ಟನ್ ಬ್ಲಾಕ್, ಡೆಯಟೆನ್ ಲೆಫ್ಟನೆಂಟ್, ಲೆಫ್ಟನೆಂಟ್ ಸಿವೆಲ್ ಕೂಡ ಕೊಲ್ಲಲ್ಪಟ್ಟರು. ಇಷ್ಟೇ ಅಲ್ಲದೇ ಚನ್ನಮ್ಮನ ಅಂಗರಕ್ಷಕ ಅಮಟೂರ ಬಾಳಪ್ಪ ಥ್ಯಾಕರೆಗೆ ಗುಂಡಿಟ್ಟು ಕೊಲ್ಲುವ ಮೂಲಕ ಕಿತ್ತೂರಿಗೆ ದಿಗ್ವಿಜಯ ತಂದು ಕೊಟ್ಟರು'' ಎಂದರು.