ದಾವಣಗೆರೆ:ಸಂತ ಸೇವಾಲಾಲ್ ಮಹಾರಾಜರು, ಬಂಜಾರ ಸಮುದಾಯದ ಆರಾಧ್ಯ ದೈವ ಕೂಡ ಹೌದು, ಅವರು ಸಮಾಜದ ಪ್ರಗತಿಯಲ್ಲಿ ಧರ್ಮದ ಪಾತ್ರವನ್ನು ಒತ್ತಿ ಹೇಳಿದವರು. ತಮ್ಮ ಪವಾಡ, ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜನ ಮನದಲ್ಲಿ ಗುರುವಿನ ಸ್ಥಾನ ಪಡೆದವರು. ಜನತೆಗೆ ವ್ಯಸನ ಮುಕ್ತರಾಗಿ ಎಂದು ಬೋಧಿಸಿದ ಸೇವಾಲಾಲರು ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿ ಮಾತು ಹೇಳಿದ್ದರು.
ಇತಂಹ ಮಹಾನ್ ಸಂತನ ಜಯಂತಿ ಇಂದು. ಈ ಹಿನ್ನೆಲೆಯಲ್ಲಿ ಸೇವಾಲಾಲ್ ಅವರ ಪವಿತ್ರ ಕ್ಷೇತ್ರದಲ್ಲಿ ನಿನ್ನೆ ಸಂಭ್ರಮ ಸಡಗರ ಮನೆ ಮಾಡಿತ್ತು. ಬಂಜಾರ ಸಮುದಾಯದ ಬಾಂಧವರು ಮಾಲೆ ಧರಿಸಿ ಪವಿತ್ರ ಸ್ಥಳ ಭಯಾಗಡ್ ಕಡೆ ಹೆಜ್ಜೆ ಹಾಕಿದರು. ಅಲ್ಲದೆ ಸಂತ ಸೇವಾಲಾಲ್ ಅವರ ಜನ್ಮಸ್ಥಳದಲ್ಲಿ ಎಲ್ಲಿ ನೋಡಿದರಲ್ಲಿ ಮಾಲಾಧಾರಿಗಳೇ ಕಾಣಸಿಗುತ್ತಿದ್ದರು. ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾಗಿದ್ದ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು.
ಜನರ ಅಂಧಕಾರ ಹೋಗಲಾಡಿಸಿದವರು:ಸಂತ ಸೇವಾಲಾಲ್ ಮಹಾರಾಜರು ಭೀಮ ನಾಯಕ್, ಧರ್ಮಿಣಿ ಯಾಡಿಯವರ ಪುತ್ರನಾಗಿ 15 ಫೆಬ್ರವರಿ 1739ರಲ್ಲಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನ ಕೊಪ್ಪದಲ್ಲಿ ಜನ್ಮ ತಾಳಿದರು. ಸಂತ ಸೇವಾಲಾಲ್ರ ಜನ್ಮವಾದ ನಂತರ ಸೂರಗೊಂಡನ ಕೊಪ್ಪವನ್ನು ಭಾಯ್ಗಢ ಎಂದು ನಾಮಕರಣ ಮಾಡಲಾಯಿತು.
ಪವಾಡಗಳನ್ನು ಮಾಡುವ ಮುಖೇನಾ ಸೇವಾಲಾಲ್ ಜನರ ಮನಸ್ಸುಗಳಲ್ಲಿ ಮನೆ ಮಾಡಿದರು. ಹದಿನೆಂಟನೇ ಶತಮಾನದಲ್ಲಿ ಲಂಬಾಣಿ ಸಮಾಜದ ಜನರ ಹಕ್ಕಿಗಾಗಿ ಹೋರಾಟವನ್ನು ಮೈಗೂಡಿಸಿಕೊಂಡಿದ್ದರು. ಅಂದಿನ ಹೈದರಾಬಾದ್ನ ನಿಜಾಮರು ಹಾಗೂ ಮೈಸೂರು ಅರಸರೊಂದಿಗೆ ಹೋರಾಟ ಮಾಡಿದರು. ಲಂಬಾಣಿ ಸಮುದಾಯ ಜನ ಸಾವಿರಾರು ವರ್ಷಗಳಿಂದ ಅರಣ್ಯ ವಾಸಿಗಳಾಗಿ ಜೀವನ ಸಾಗಿಸುತ್ತಿದ್ದರು. ಅವರನ್ನು ಮುಖ್ಯವಾಹಿನಿಗೆ ತರಲು ಅಜ್ಞಾನ ಅಂಧಕಾರಗಳನ್ನು ದೂರ ಮಾಡಿ ಜ್ಞಾನದ ಮಾರ್ಗ ತೋರಿದ ಕೀರ್ತಿ ಸೇವಾಲಾಲರಿಗೆ ಸಲ್ಲುತ್ತದೆ. ಅಲ್ಲದೆ ಇವರಿಗೆ ಮೋತಿವಾಳು ಸಮುದಾಯದ ಜನ ಕರೆಯುತ್ತಿದ್ದರು.
ಪೋರ್ಚುಗೀಸರಿಂದ ಮುತ್ತಿನ ಹಾರ ಕಾಣಿಕೆ:ಪೋರ್ಚುಗೀಸರಿಂದ ಮುತ್ತಿನ ಹಾರ ಕಾಣಿಕೆಯಾಗಿ ಪಡೆದಿದ್ದರು, ಆದ್ದರಿಂದ ಇವರಿಗೆ ಮೋತಿವಾಳೋ ಎಂಬ ಹೆಸರು ಬಂತು. ಮುಂಬೈಯನ 'ಸ್ಮಿತ್ ಭಾವುಚಾ' ಪ್ರದೇಶದಲ್ಲಿ ಪೋರ್ಚುಗೀಸರ ಹಡಗು ಪೇಚಿಗೆ ಸಿಲುಕಿತ್ತು. ಆ ಹಡನ್ನು ಚಾಣಾಕ್ಷತನದಿಂದ ದಡ ಸೇರಿಸಿದ್ದರು. ಈ ಹಿನ್ನೆಲೆಯಲ್ಲಿ ಸೇವಾಲಾಲ್ ಮಹಾರಾಜರಿಗೆ ಪೋರ್ಚುಗೀಸರು ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು.