ಬಾಗಲಕೋಟೆ: ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದಿದ್ದಕ್ಕೆ ಮುನಿಸಿಕೊಂಡಿದ್ದ ವೀಣಾ ಕಾಶಪ್ಪನವರ, ತಣ್ಣಗೆ ಆಗಿದ್ದು ಅಭ್ಯರ್ಥಿ ಸಂಯುಕ್ತಾ ಪಾಟೀಲ ಜೊತೆಗೆ ಕೈ ಜೋಡಿಸಿ ನಾಮಪತ್ರ ಸಲ್ಲಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.
ನಾಮಪತ್ರ ಸಲ್ಲಿಸುವ ಮುಂಚೆ ಬಾಗಲಕೋಟೆ ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಮೆರವಣಿಗೆ ನಡೆಸಲಾಯಿತು. ಕೆರೂಡಿ ಆಸ್ಪತ್ರೆಯ ಕ್ರಾಸ್ ನಿಂದ ತೆರದ ವಾಹನದ ಮೂಲಕ ಬೃಹತ್ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಚಿವರಾದ ಆರ್.ಬಿ.ತಿಮ್ಮಾಪೂರ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಶಾಸಕರಾದ ಎಚ್.ವೈ ಮೇಟಿ ಹಾಗೂ ಜೆ.ಟಿ ಪಾಟೀಲ ಸೇರಿದಂತೆ ಪ್ರಮುಖ ಮುಖಂಡರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಬಸವೇಶ್ವರ ವೃತ್ತದಲ್ಲಿ ಮೆರವಣಿಗೆ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಲಾಯಿತು. ಸಚಿವ ಶಿವಾನಂದ ಪಾಟೀಲ ಅವರು ಪಾದಯಾತ್ರೆ ಮಾಡುತ್ತಾ, ತಮ್ಮ ಪುತ್ರಿ ಪರವಾಗಿ ಪ್ರಚಾರ ಮಾಡಿದರು.
ಬಸವೇಶ್ವರ ವೃತ್ತ ದಿಂದ ವಲ್ಲಭಭಾಯಿ ಚೌಕ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ, ಮೆರವಣಿಗೆ ಮುಕ್ತಾಯ ಗೊಳಿಸಲಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಸಮಾಧಾನಗೊಂಡಿದ್ದ ವೀಣಾ ಕಾಶಪ್ಪನವರೊಂದಿಗೆ ಮತ್ತೊಂದು ಭಾರಿ ಅಭ್ಯರ್ಥಿ ಸಂಯುಕ್ತ ಪಾಟೀಲ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವೀಣಾ ಕಾಶಪ್ಪನವರ ಮಾತನಾಡಿ, ಕಾಂಗ್ರೆಸ್ ಪಕ್ಷದ ಮುಖಂಡರು ಮುಂದಿನ ದಿನಮಾದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಮುಖಂಡರ ಭರವಸೆ ಹಾಗೂ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಎಲ್ಲವನ್ನು ಮೆರೆತು ನಾಮಪತ್ರ ಸಲ್ಲಿಕೆಗೆ ಬಂದಿದ್ದೇನೆ. ಮುಂದೆ ಸಂಯುಕ್ತಾ ಜೊತೆಗೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.