ಬೆಂಗಳೂರು: ನಗರದ ಉತ್ತರ ಭಾಗದಲ್ಲಿ ಲಂಗ್ ಸ್ಪೇಸ್ ಕೊರತೆ ಹಿನ್ನೆಲೆಯಲ್ಲಿ ಯಲಹಂಕ ಆರ್ಟಿಒ ಬಳಿ ಇರುವ ಮಾದಪ್ಪನಹಳ್ಳಿಯ 153 ಎಕರೆ ಅರಣ್ಯ ಭೂಮಿಯಲ್ಲಿ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಅರಣ್ಯ ಭವನದಲ್ಲಿಂದು ನಡೆದ ವನ್ಯಜೀವಿ ಸಪ್ತಾಹದ ಔಪಚಾರಿಕ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
153 ಎಕರೆ ಅರಣ್ಯ ಭೂಮಿಯನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಗುತ್ತಿಗೆ ನೀಡಲಾಗಿತ್ತು. ಈಗ ಗುತ್ತಿಗೆ ಅವಧಿ ಮುಗಿದಿದ್ದು, ಸಿಎಸ್ಆರ್ ನಿಧಿಯ ನೆರವಿನೊಂದಿಗೆ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಸಸ್ಯೋದ್ಯಾನ ಮಾಡಲಾಗುವುದು. ಯಲಹಂಕ ಸುತ್ತುಮುತ್ತ ನಗರೀಕರಣ ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗುವಂತೆ ಅಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಸ್ಥಾಪಿಸಿದಲ್ಲಿ ಅದು ಅತ್ಯಂತ ಆಕರ್ಷಣೀಯ ತಾಣವಾಗುತ್ತದೆ ಎಂದರು.
ಭಾರತೀಯ ಅರಣ್ಯ ಸಮೀಕ್ಷಾ ವರದಿಯಂತೆ ಬೆಂಗಳೂರು ಭಾರತದಲ್ಲಿ ಮೂರನೇ ಅತಿ ಹೆಚ್ಚು ಭೂಪ್ರದೇಶ ಹೊಂದಿದೆ. ನಗರವು ಸುಮಾರು 89 ಚದರ ಕಿ.ಮೀನಷ್ಟು ಅರಣ್ಯ ಪ್ರದೇಶ ಹೊಂದಿದೆ. ಬೆಂಗಳೂರಿನ ವೃಕ್ಷ ಹೊದಿಕೆ ಶೇ.6.81ರಷ್ಟಿದೆ. ಕಳೆದ 10 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ 5 ಚದರ ಕಿಮೀನಷ್ಟು ಹಸಿರು ಹೊದಿಕೆ ಕಡಿಮೆಯಾಗಿದೆ. ಬೆಂಗಳೂರಿಗೆ ಉದ್ಯಾನ ನಗರಿ ಎನ್ನುವ ಹೆಗ್ಗಳಿಕೆಯನ್ನು ಮರುಸ್ಥಾಪಿಸಲು ಇಲಾಖೆಯು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಇನ್ನು ಹೆಚ್ಚಾಗಿ ಮಾಡಬೇಕಾಗಿದೆ. ಜೊತೆಗೆ ರಾಜಧಾನಿಯಲ್ಲಿ ಒತ್ತುವರಿಯಾಗಿರುವ ಅರಣ್ಯಭೂಮಿಯನ್ನು ಮರಳಿ ವಶಕ್ಕೆ ಪಡೆಯಬೇಕಿದೆ ಎಂದು ಹೇಳಿದರು.