ಬಳ್ಳಾರಿ : ಹಿಮಾಚಲ ಪ್ರದೇಶದಿಂದ 25 ವರ್ಷಗಳ ಬಳಿಕ ರಾಜ್ಯಕ್ಕೆ ಮರಳಿದ ಬಳ್ಳಾರಿಯ ಸಾಕಮ್ಮ ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಆಧಾರ್, ಪಡಿತರ ಚೀಟಿ, ವೃದ್ಧಾಪ್ಯ ವೇತನ, ಗೃಹ ಲಕ್ಷ್ಮಿ ಯೋಜನೆಗಳನ್ನು ಒದಗಿಸಲು ಮನವಿ ಮಾಡಿದರು.
ಸರ್ಕಾರಿ ಸೌಲಭ್ಯ, ನೆರವು ನೀಡುವ ಅಭಯ; ಮನವಿ ಸ್ವೀಕರಿಸಿದ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾರಿಮರ ಅವರು ಮಾತನಾಡಿ, 'ಸಾಕಮ್ಮ ಅವರಿಗೆ ಎಲ್ಲ ದಾಖಲೆ ಪತ್ರಗಳನ್ನು ಮಾಡಿಸಿಕೊಡಬೇಕು. ಸರ್ಕಾರಿ ಸವಲತ್ತುಗಳು ಸಿಗುವಂತೆ ಮಾಡಬೇಕು ಎಂದು ಸಚಿವ ಹೆಚ್ ಸಿ ಮಹದೇವಪ್ಪ ಮತ್ತು ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಸಾಕಮ್ಮ ಅವರಿಂದ ದಾಖಲೆಪತ್ರ ಪಡೆಯಲಾಗಿದೆ. ಎಲ್ಲ ಸವಲತ್ತು ಕೊಡಿಸಲು ಇಲಾಖೆ ನೆರವು ನೀಡಲಿದೆ' ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾರಿಮರ ಮಾತನಾಡಿದರು (ETV Bharat) ಆರಂಭದಲ್ಲಿ ಸಾಕಮ್ಮ ಅವರಿಗೆ ತಮ್ಮ ಮಕ್ಕಳನ್ನು ಗುರುತಿಸಲು ಸಾಧ್ಯವಾಗದೇ, ಸೋದರಿಯ ಮನೆಯಲ್ಲಿ ವಾಸವಿದ್ದರು. ಈಗ ಮಕ್ಕಳೊಂದಿಗೆ ನೆಲೆಸಿದ್ದಾರೆ.
ರಾಜ್ಯಕ್ಕೆ ಕರೆತಂದ ಅಧಿಕಾರಿಗಳ ತಂಡ : ಹಗರಿಬೊಮ್ಮನಹಳ್ಳಿ ತಾಲೂಕಿನ ಪೊತಲ ಕಟ್ಟಿ ಗ್ರಾಮದ ಸಾಕಮ್ಮ ತನಗರಿವಿಲ್ಲದೇ ಹೊಸಪೇಟೆ ರೈಲ್ವೆ ನಿಲ್ದಾಣದಿಂದ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಅನಾಥಾಶ್ರಮ ಸೇರಿದ್ದರು. ಕನ್ನಡಿಗ ಐಪಿಎಸ್ ಅಧಿಕಾರಿ ಅವರನ್ನು ಗುರುತಿಸಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮನ್ವಯದಿಂದ ಸಾಕಮ್ಮ ಅವರನ್ನು ಇತ್ತೀಚಿಗೆ ಬಳ್ಳಾರಿಗೆ ಕರೆತಂದಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರ ಜೊತೆಗೆ ಭೇಟಿ ಮಾಡಿಸಿದ್ದ ಅಧಿಕಾರಿಗಳು, ಬಳ್ಳಾರಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಒಂದಷ್ಟು ಔಪಚಾರಿಕ ಪ್ರಕ್ರಿಯೆಗಳನ್ನು ಮುಗಿಸಿ ಅಜ್ಜಿಯನ್ನು ಮಕ್ಕಳ ಜೊತೆಗೆ ಕಳುಹಿಸಿಕೊಟ್ಟಿದ್ದರು.
ಸಾಕಮ್ಮ ಅವರಿಗೆ ಮೂವರು ಮಕ್ಕಳು : ಸಾಕಮ್ಮ ಅವರಿಗೆ ನಾಲ್ವರು ಮಕ್ಕಳಿದ್ದರು, ಅದರಲ್ಲಿ ಮೂವರು ಮಾತ್ರ ಈಗ ಬದುಕಿದ್ದಾರೆ ಮತ್ತು ಮದುವೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಾಕಮ್ಮ ಅವರ ಪತಿಯೂ ತೀರಿಹೋಗಿದ್ದಾರೆ. ಸಾಕಮ್ಮ ತನ್ನ ಕುಟುಂಬದಿಂದ ಬೇರ್ಪಟ್ಟಾಗ, ಅವಳ ಮಕ್ಕಳು ಚಿಕ್ಕ ವಯಸ್ಸಿನಲ್ಲಿದ್ದರು.
ಇದನ್ನೂ ಓದಿ :ಮಕ್ಕಳ ಮಡಿಲು ಸೇರಿದ 'ಸಾಕಮ್ಮ': ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದ ಬಳ್ಳಾರಿ - SAKAMMA REUNITED WITH HER FAMILY