ಕರ್ನಾಟಕ

karnataka

ETV Bharat / state

ಎಸ್ ಎಂ ಕೃಷ್ಣ ನಿಧನ: ಡಿಸಿಎಂ, ಗೃಹ ಸಚಿವ, ಸ್ಪೀಕರ್, ಸಭಾಪತಿ ಸೇರಿ ಗಣ್ಯರ ಸಂತಾಪ - SM KRISHNA PASSES AWAY

ಎಸ್ ಎಂ ಕೃಷ್ಣ ನಿಧನಕ್ಕೆ ಡಿಸಿಎಂ, ಗೃಹ ಸಚಿವರು ಸೇರಿದಂತೆ ಅನೇಕ ಕೈ ನಾಕಯರು, ಸಂತಾಪ ಸೂಚಿಸಿದ್ದಾರೆ.

SM KRISHNA PASSES AWAY
ಎಸ್ ಎಂ ಕೃಷ್ಣ (ETV Bharat)

By ETV Bharat Karnataka Team

Published : Dec 10, 2024, 11:15 AM IST

Updated : Dec 10, 2024, 11:51 AM IST

ಬೆಳಗಾವಿ/ಬೆಂಗಳೂರು: ದೇಶ ಕಂಡ ಮೇಧಾವಿ, ಅಪ್ರತಿಮ ನಾಯಕ ಎಸ್. ಎಂ. ಕೃಷ್ಣ ನಿಧನಕ್ಕೆ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಅನೇಕ ಕಾಂಗ್ರೆಸ್​ ಮುಖಂಡರು ಸಂತಾಪ ಸೂಚಿಸಿದರು.

ಡಿಸಿಎಂ ಹೇಳಿಕೆ: ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರಾದ ಎಸ್ ಎಂ ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಇಂದು ಬೆಳಗಿನ ಜಾವ 2.30 ರ ಸುಮಾರಿಗೆ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಕೆಲಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸದಾಸಶಿವನಗರದ ನಿವಾಸದಲ್ಲಿ ಇಂದು ಇಡೀ ದಿನ ಇಡಲಾಗಿದೆ.

ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಬೆಳಗ್ಗೆ ನೆರವೇರಿಸಲಾಗುವುದು ಎಂದು ಎಸ್ ಎಂ ಕೃಷ್ಣ ಅವರ ದೀರ್ಘಕಾಲದ ಒಡನಾಡಿ, ಸಂಬಂಧಿ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಸ್ ಎಂ ಕೃಷ್ಣ ನಿಧನದ ಹಿನ್ನೆಲೆ ಗಣ್ಯರ ಸಂತಾಪ (ETV Bharat)

ಪರಮೇಶ್ವರ್ ಸಂತಾಪ:ಬೆಳಗಾವಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಎಸ್.ಎಂ. ಕೃಷ್ಣ ಅವರು ಅವರದ್ದೇಯಾದಂತಹ ವ್ಯಕ್ತಿತ್ವ ಹೊಂದಿದ್ದವರು. ಅದು ರಾಜ್ಯದಲ್ಲಿ ನಮಗೆ ಆದರ್ಶವಾಗಿತ್ತು. ಅವರ ರಾಜಕೀಯ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದರು.

ಅತ್ಯಂತ ಸಹನಶೀಲರು, ಸಮಚಿತ್ತದಿಂದ ಎಲ್ಲರನ್ನೂ ಕೂಡ ಅವರ ಅಭಿಪ್ರಾಯ ಕೇಳಿಕೊಂಡು ತೀರ್ಮಾನ ಮಾಡುವುದು ಅವರ ವಿಶೇಷತೆ. ನಾನು ಅವರ ಜೊತೆಗೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಉಪಾಧ್ಯಕ್ಷನಾಗಿದ್ದೆ, ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಅವರನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರ ದೂರದೃಷ್ಠಿಯ ಕೋನ, ಅವರು ಬಳಸುತ್ತಿದ್ದ ಪದಗಳು ನಮಗೆ ಯಾರಿಗೂ ಬರುವುದಿಲ್ಲ.

ತೆಲಗಿ ಪ್ರಕರಣವನ್ನು ಸಿಬಿಐಗೆ ಕೊಡಬೇಕೆಂದು ಪಟ್ಟು ಹಿಡಿದಾಗ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಸಿಬಿಐಗೆ ‌ಕೊಟ್ಟಿದ್ದೆವು. ಅವರಿಗೆ ಅನೇಕ ಸವಾಲು ಬಂದವು. ಡಾ. ರಾಜ್​ಕುಮಾರ್​ ಅವರ ಅಪಹರಣ, ಕಾವೇರಿ ವಿವಾದ, ಬರಗಾಲದ ದೊಡ್ಡ ಸವಾಲು ಅವರ ಎದುರುಗಡೆ ಬಂದವು. ಅದನ್ನು ಎದುರಿಸಿ ರಾಜ್ಯವನ್ನು ಮಾದರಿಯಾಗಿಸಿದರು. ಲಕ್ಷಾಂತರ ಸಂಖ್ಯೆಯಲ್ಲಿ ಯುವಕರು ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಪಡೆದಿರುವುದು ಎಸ್.ಎಂ.ಕೃಷ್ಣ ಅವರಿಂದಲೆ. ಕಾಂಗ್ರೆಸ್ ಹೈಕಮಾಂಡ್​ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರೊಬ್ಬ ಅಜಾತಶತ್ರು. ಅವರ ಅಗಲಿಕೆಯನ್ನು ವೈಯಕ್ತಿಕವಾಗಿ ನನಗೆ ತುಂಬಾ ನೋವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಹೆಚ್​ ಕೆ ಪಾಟೀಲ್ ಸಂತಾಪ:ನೀರಾವರಿಗೆ ಕೃಷ್ಣ ಅವರ ಕೊಡುಗೆ ಅಪಾರ. ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಒತ್ತು ನೀಡುತ್ತಿದ್ದರು. ಕೆಬಿಜೆಎನ್ಎಲ್ ಕರ್ನಾಟಕ ನೀರಾವರಿ ನಿಗಮ ಸ್ಥಾಪನೆ ಮಾಡಿ ನೆರವಾದರು. ಅಮೂಲ್ಯವಾದ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ನನಗೆ ವೈಯಕ್ತಿಕವಾಗಿ ತುಂಬಾ ನೋವಾಗಿದೆ'' ಎಂದು ಸಚಿವ ಹೆಚ್​ ಕೆ ಪಾಟೀಲ್ ಕೂಡ ಸಂತಾಪ ಸೂಚಿಸಿದರು.

ಸಂತೋಷ್ ಲಾಡ್ ಸಂತಾಪ: ಎಸ್ ಎಂ ಕೃಷ್ಣ ಸಾಹೇಬರ ನಿಧನ ಇಡೀ ರಾಜ್ಯಕ್ಕೆ ನಷ್ಟ. ದೇಶದ ರಾಜಕಾರಣದ ಎಲ್ಲ ಹುದ್ದೆ ನಿಭಾಯಿಸಿದ್ದವರು. ದೂರದೃಷ್ಟಿಯ ನಾಯಕರಾಗಿದ್ದ ಅವರು, ರಾಜ್ಯದ ಐಟಿ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಆದರೆ, ಇವತ್ತು ಅವರ ಅಗಲಿಕೆ ನನಗೆ ತುಂಬಾ ನೋವು ಉಂಟುಮಾಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ ಸಂತಾಪ ಸೂಚಿಸಿದರು.

ಗುಂಡೂರಾವ್:ಎಸ್ ಎಂ ಕೃಷ್ಣ ನಿಧನದ ಸುದ್ದಿಯಿಂದ ಆಘಾತಕ್ಕೀಡಾಗಿದ್ದೇನೆ. ಅತ್ಯಂತ ಗಾಂಭೀರ್ಯ, ಶಿಸ್ತಿನಿಂದ ತಮ್ಮ ರಾಜಕಾರಣ ಮಾಡಿದ್ರು. ಅವರು ಸಿಎಂ ಆಗಿದ್ದಾಗ ನಾನು ಚೀಫ್​ ವಿಪ್ ಆಗಿದ್ದೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆದರೆ, ಇವತ್ತು ಅವರ ವಯೋಸಕಜ ಸಾವು ನೋವು ಮೂಡಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಎಸ್ ಎಂ ಕೃಷ್ಣ ಅವರ ಬಗ್ಗೆ ವ್ಯಕ್ತಿತ್ವದ ಕುರಿತು ಎಲ್ಲರಿಗೂ ಅರಿವಿದೆ. ಆಧುನಿಕ ಬೆಂಗಳೂರು ನಿರ್ಮಾತೃ ಎಸ್ ಎಂ ಕೃಷ್ಣ ಬೆಂಗಳೂರಿಗೆ ಐಟಿ ಖ್ಯಾತಿಗೆ ಕಾರಣರಾಗಿದ್ದು, ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ರಾಜಕಾರಣ ಪ್ರಾರಂಭ ಮಾಡಿದರು ಎಂದು ಸಚಿವ ಕೆ. ಎನ್ ರಾಜಣ್ಣ ಸಂತಾಪ ಸೂಚಿಸಿದರು.

ಅವರು ಬೆಳಗಾವಿ ನಗರದಲ್ಲಿ ಮಾದ್ಯಮಗಳ ಜೊತೆ ಮಾತನಾಡುತ್ತಾ, ಮಿತಭಾಷಿಕ, ಅಪರೂಪದ ಮಾತು, ಯಾವುದೇ ಗೊಂದಲಕ್ಕೆ ಈಡಾಗದ ರಾಜಕಾರಣಿ ಅವರು. ರಾಜ್ಯದ ಹಿತಾಸಕ್ತಿಯಿಂದ ಯಾವುದೇ ನಿರ್ಧಾರ ಪಡೆಯುತ್ತಿದ್ದರು. ಅವರ ಅಗಲಿಕೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.
ಅವರ ನಿಧನದ ದುಃಖವನ್ನು ತಡೆಯುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಮಹದೇವಪ್ಪ ಕಂಬನಿ: ಸಚಿವ ಹೆಚ್.ಸಿ.ಮಹದೇವಪ್ಪ ಕಂಬನಿ ಮಿಡಿಯುತ್ತಾ, ಎಸ್.ಎಂ. ಕೃಷ್ಣ ಒಬ್ಬ ಮುತ್ಸದ್ಧಿ ರಾಜಕಾರಣಿ. ಒಬ್ಬ ರಾಜಕಾರಣಿ ಹೇಗಿರಬೇಕೆಂಬುದಕ್ಕೆ ಮಾದರಿಯಾಗಿದ್ದವರು. ಬೆಂಗಳೂರು ಅಭಿವೃದ್ಧಿಗೆ ಶ್ರಮಿಸಿದ್ದವರು. ಇವತ್ತು ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರ ಅಗಲಿಕೆ ಎಲ್ಲರಿಗೆ ನೋವು ತಂದಿದೆ ಎಂದರು.

ನಾವು ಅವರ ಜೊತೆಯಲ್ಲಿ ಬೆಳೆದವರು: ಬಿ.ಕೆ. ಹರಿಪ್ರಸಾದ್ ಮಾತನಾಡಿ, ರಾಜ್ಯದ ಹಿರಿಯ ಮುತ್ಸದ್ಧಿ ರಾಜಕಾರಣಿ. ನಾವು ಅವರ ಜೊತೆಯಲ್ಲಿ ಬೆಳೆದವರು. ಹಲವಾರು ಕೊಡುಗೆಗಳನ್ನ ರಾಜ್ಯಕ್ಕೆ ಕೊಟ್ಟಿದ್ದಾರೆ. ಯುವಕರಿಗೆ ಹೆಚ್ಚಿನ ಆದ್ಯತೆ ಕೊಡ್ತಿದ್ರು. ಬೆಂಗಳೂರು ವಿಶ್ವಮಟ್ಟಕ್ಕೆ ಗುರುತಿಸಲು ಕಾರಣ. ಅವರ ದೂರದರ್ಶಿತ್ವ ನಾಯಕತ್ವ ಎಲ್ಲರಿಗೆ ಗೊತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಂಬನಿ ಮಿಡಿದರು.

ಸಭಾಧ್ಯಕ್ಷ ಯು.ಟಿ.ಖಾದರ್: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಎಸ್.ಎಂ. ಕೃಷ್ಣ ನಿಧನ ನೋವಿನ ವಿಚಾರ ಹಾಗೂ ತುಂಬಲಾರದ ನಷ್ಟ ತಂದಿದೆ. ಅವರ ಕಾಲ ಘಟ್ಟದಲ್ಲಿ ರಾಜ್ಯವನ್ನ ವಿಶ್ವದಲ್ಲಿ ಗುರುತಿಸುವಂತಾಗಿದೆ. ದೂರದರ್ಶಿತ್ವದ ರಾಜಕಾರಣಿ. ಅವರು ಕಿಯೋನಿಕ್ಸ್ ಮೂಲಕ ಗ್ರಾಮೀಣ ಜನರ ಬಳಿಗೆ ತಂತ್ರಜ್ಞಾನ ತಲುಪಿಸಿದವರು. ರಾಜಕಾರಣದ ಪ್ರಮುಖ ಹುದ್ದೆಗಳನ್ನ ಸಕಾರಾತ್ಮಕ ಹಾಗೂ ಪ್ರೀತಿ ಮೂಲಕ ಅಲಂಕರಿಸಿದವರು. ಅವರ ಜೀವನವೇ ನಮಗೆಲ್ಲ ಮಾರ್ಗದರ್ಶನ ಮತ್ತು ಸಂದೇಶ. ಅವರ ಅಗಲಿಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಹೊರಟ್ಟಿ ಸಂತಾಪ: ಭಾರತ ದೇಶ ಕಂಡ ಅಪ್ರತಿಮ ರಾಜಕೀಯ ಮುತ್ಸದ್ಧಿ, ನಾಯಕ , ಮೌಲ್ಯಾಧಾರಿತ ಸೃಜನಶೀಲ ರಾಜಕಾರಣಿ, ಕೇಂದ್ರದ ಮಾಜಿ ಸಚಿವ, ಕನ್ನಡ ನಾಡಿನ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆ, ಲೋಕಸಭೆ, ವಿಧಾನ ಪರಿಷತ್ ಹಾಗೂ ವಿಧಾನ ಸಭೆಯ ಸದಸ್ಯರಾಗಿ, ರಾಜ್ಯಪಾಲರಾಗಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಎಸ್.ಎಂ.ಕೃಷ್ಣ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಅದರಲ್ಲೂ ಬೆಂಗಳೂರು‌ ನಗರದ ಅಭಿವೃದ್ಧಿಯ ಹರಿಕಾರರಾಗಿದ್ದ ಎಸ್.ಎಂ.ಕೃಷ್ಣ ಅವರು ಜಗತ್ತಿನ ಭೂಪಟದಲ್ಲಿ ಬೆಂಗಳೂರಿನ ಹೆಸರನ್ನು ಚಿರಸ್ಥಾಯಿಗೊಳಿಸಿ ಬ್ರಾಂಡ್ ಬೆಂಗಳೂರಿನ ಪ್ರವರ್ತಕರಾಗಿ ಅದರ ಬೆಳವಣಿಗೆಗೆ ಶ್ರಮಿಸಿದ ಪರಿ ಅನನ್ಯವಾದುದು. ಕೃಷ್ಣ ಅವರ ಅಭಿವೃದ್ಧಿಪರ ಚಿಂತನೆಗಳು, ದೂರದೃಷ್ಟಿ, ಹಾಗೂ ಅವರು ರಾಜ್ಯದ ಅಭಿವೃದ್ಧಿ ಬಗೆಗೆ ಹೊಂದಿದ್ದ ಕಾಳಜಿಯನ್ನು ಹೊರಟ್ಟಿ ಬಣ್ಣಿಸಿದ್ದಾರೆ.

ಸಂಗೀತ, ಯೋಗ ಹಾಗೂ ಲಾನ್ ಟೆನ್ನಿಸ್ ಆಟದಲ್ಲಿ ವಿಶೇಷವಾದ ಆಸಕ್ತಿ‌ಹೊಂದಿದ್ದ ಎಸ್.ಎಂ. ಕೃಷ್ಣ ಅವರು ಮಿತಭಾಷಿ ಹಾಗೂ ಸೌಮ್ಯ ಸ್ವಭಾವದ ಅತ್ಯುತ್ತಮ ಆಡಳಿತಗಾರರಾಗಿದ್ದ ನಾಡು ಕಂಡ ಅಪರೂಪದ ರಾಜಕಾರಣಿಗಳಾಗಿದ್ದರು. ವೈಯಕ್ತಿಕವಾಗಿ ಅತೀವ ಆತ್ಮೀಯತೆ ಹೊಂದಿದ್ದ ತಾವು, ಅವರೊಂದಿಗೆ ರಾಜ್ಯದ ಅಭಿವೃದ್ಧಿಗೆ ಸಂಬಧಿಸಿದಂತೆ, ಉತ್ತರ ಕರ್ನಾಟಕದ ಹಲವು ಯೋಜನೆಗಳ ಕುರಿತಂತೆ ಹಲವು ಬಾರಿ ಚರ್ಚಿಸಿದ್ದನ್ನು ನೆನಪಿಸಿಕೊಂಡರು ಬಸವರಾಜ ಹೊರಟ್ಟಿ. ಕೃಷ್ಣ ಅವರ ಸರಳತೆ, ಸಜ್ಜನಿಕೆ, ದೂರದರ್ಶಿತ್ವ, ಅಭಿವೃದ್ಧಿ ಬಗೆಗಿನ ಚಿಂತನೆಗಳು, ಭಾಷಾ ಬಳಕೆ ಮುಂತಾದ ಉದಾತ್ತ ಗುಣಗಳು ಇಂದಿನ ರಾಜಕಾರಣಿಗಳಿಗೆ ಅನುಕರಣೀಯವಾಗಿವೆ ಎಂದಿದ್ದಾರೆ.

ಎಸ್.ಎಂ. ಕೃಷ್ಣ ಅವರ ಅಗಲಿಕೆಯಿಂದ ನಮ್ಮ‌ ರಾಜ್ಯವು ಸೇರಿದಂತೆ ದೇಶವು ಹಿರಿಯ ಮುತ್ಸದ್ಧಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ, ಅವರ ಅಗಲಿಕೆಯಿಂದ, ಅವರ ಕುಟುಂಬ ವರ್ಗದವರಿಗೆ ಮತ್ತು ಅಪಾರ ಅಭಿಮಾನಿ ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಬಸವರಾಜ ಹೊರಟ್ಟಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಎಸ್.ಎಂ.ಕೃಷ್ಣ ನಿಧನ; ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ, ನಾಳೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

Last Updated : Dec 10, 2024, 11:51 AM IST

ABOUT THE AUTHOR

...view details