ಕರ್ನಾಟಕ

karnataka

ETV Bharat / state

ಲಾರಿ-ಬಸ್ ಚೆಸ್ಸಿ ಬಳಸಿ ಸೇತುವೆ ನಿರ್ಮಾಣ: ಕೊನೆಗೂ ಕಾಲುಸಂಕಕ್ಕೆ ಮುಕ್ತಿ - Rural bridge - RURAL BRIDGE

ಬೈಂದೂರು ತಾಲೂಕಿನಲ್ಲಿ ಲಾರಿ, ಬಸ್​ಗಳ ಚೆಸ್ಸಿ ಬಳಸಿ ಸೇತುವೆ ನಿರ್ಮಿಸಲಾಗಿದೆ. ಇದೀಗ ಇಲ್ಲಿನ ಜನರು ಸೇತುವೆ ಮೇಲೆ ನಿರ್ಭಯವಾಗಿ ತಿರುಗಾಡುತ್ತಿದ್ದಾರೆ.

bridge
ಸೇತುವೆ (ETV Bharat)

By ETV Bharat Karnataka Team

Published : Jul 14, 2024, 7:11 PM IST

ಗುರುರಾಜ್ ಗಂಟಿಹೊಳೆ (ETV Bharat)

ಉಡುಪಿ:ಮಳೆಗಾಲ ಬಂದರೆ ಸಾಕು, ನದಿಗಳು ಮೈದುಂಬಿ ಹರಿಯುತ್ತವೆ. ಅದರಲ್ಲೂ ಬೈಂದೂರು ತಾಲೂಕಿನಲ್ಲಿ ರಭಸವಾಗಿ ಹರಿಯುವ ನದಿಗಳನ್ನು ದಾಟುವುದೇ ಜನರಿಗೆ ಸವಾಲು. ಇದಕ್ಕಾಗಿ ಇಲ್ಲಿಯ ಸ್ಥಳೀಯ ಶಾಸಕ ಗುರುರಾಜ್ ಗಂಟಿಹೊಳೆ ಹೊಸ ಉಪಾಯ ಮಾಡಿದ್ದಾರೆ. ಅದು ಲಾರಿ ಮತ್ತು ಬಸ್​ಗಳ ಚೆಸ್ಸಿ ಬಳಸಿ ಸೇತುವೆ ನಿರ್ಮಿಸುವುದು!

ಹೌದು, ಲಾರಿ ಮತ್ತು ಬಸ್​ಗಳ ಚೆಸ್ಸಿ ಬಳಸಿ ಸೇತುವೆ ನಿರ್ಮಿಸಬಹುದು ಅನ್ನೋದಕ್ಕೆ ಈ ಸೇತುವೆ ಉದಾಹರಣೆ. ಲಾರಿ ಮತ್ತು ಬಸ್​ಗಳ ಚೆಸ್ಸಿ ಗಟ್ಟಿಮುಟ್ಟಾದ ಕಬ್ಬಿಣದ ರಚನೆಯಾಗಿದ್ದು, ಹೆಚ್ಚೆಂದರೆ 2 ಲಕ್ಷ ರೂ ಬಳಸಿಕೊಂಡು ಈ ಸೇತುವೆಗಳನ್ನು ನಿರ್ಮಿಸಬಹುದು. ಪರ ಊರುಗಳಲ್ಲಿ ನೆಲೆಸಿರುವ ದಾನಿಗಳು ನೆರವಾದರೆ ಹಳ್ಳಿ ಜನರ ಬದುಕು ಬಂಗಾರವಾಗುವುದು ಖಂಡಿತ. ಸದ್ಯ ಮೊದಲು 72 ಅಡಿ ಉದ್ದಕ್ಕೆ ಸೇತುವೆ ನಿರ್ಮಿಸಲಾಗಿದ್ದು, ಈ ಮಳೆಗಾಲದ ನೆರೆಯನ್ನು ತಡೆದುಕೊಂಡು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಕಿರು ಸೇತುವೆಗಳನ್ನು ಇದೇ ಮಾದರಿಯಲ್ಲಿಯೇ ನಿರ್ಮಿಸಲು ಯೋಜಿಸಲಾಗಿದೆ.

ಖಾಸಗಿ ದಾನಿಗಳ ನೆರವಿನಿಂದ ಸೇತುವೆ ನಿರ್ಮಿಸಿ ಜನರಿಗೆ ಸಹಕಾರಿ : ಖಾಸಗಿಯಾಗಿ ದಾನಿಗಳ ನೆರವಿನೊಂದಿಗೆ ಸೇತುವೆ ನಿರ್ಮಿಸುವ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ಅರುಣಾಚಲಂ ಟ್ರಸ್ಟ್​​ನವರು ಅಂದಾಜು 50 ಸೇತುವೆ ನಿರ್ಮಾಣಕ್ಕೆ ಕೈಜೋಡಿಸುವ ಭರವಸೆ ಕೊಟ್ಟಿದ್ದಾರೆ. ಕಸದಿಂದ ರಸ ತೆಗೆಯುವ ಈ ಪ್ರಯತ್ನ ಅದ್ಭುತ ಪ್ರಯೋಗವಾಗಿದೆ.

ಕಷ್ಟಪಟ್ಟು ಕಾಲುಸಂಕ ದಾಟುತ್ತಿದ್ದ ಜನರಿಗೆ ಉತ್ತಮ ಸೇತುವೆ : ಕೈಯಲ್ಲಿ ಜೀವ ಹಿಡಿದುಕೊಂಡು ನದಿ ದಾಟುತ್ತಿದ್ದ ಜನರು, ಈಗ ಎದೆಯುಬ್ಬಿಸಿಕೊಂಡು ಧೈರ್ಯವಾಗಿ ಸೇತುವೆ ಮೂಲಕ ಸಂಚರಿಸುತ್ತಿದ್ದಾರೆ. ಈ ಹಿಂದೆ ಇದ್ದಂತಹ ಕಾಲುಸಂಕಗಳಲ್ಲಿ ಜನರು ಭಯದಿಂದ ದಾಟಬೇಕಾಗಿತ್ತು. ಆದರೆ ಇವಾಗ ನಿರ್ಭಿತಿಯಿಂದ ಜನರು ಹೊಸದಾಗಿ ನಿರ್ಮಿಸಲಾದ ಸೇತುವೆಯ ಮೇಲಿಂದ ದಾಟಲು ಮುಂದಾಗಿದ್ದಾರೆ. ಇಂತಹ ಸೇತುವೆ ನಿರ್ಮಾಣ ಮಾಡುವಲ್ಲಿ ಶಾಸಕರ ಪಾತ್ರ ಮಹತ್ವದಿದ್ದು, ಮೊದಲನೆಯದಾಗಿ ಶಾಸಕರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಸ್ಥಳೀಯರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸೇತುವೆ ಮೇಲೆ ಖುಷಿಯಿಂದ, ನಿರ್ಭೀತಿಯಿಂದ ತೆರಳುತ್ತಿರುವ ಜನ : ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಈ ಸೇತುವೆಯ ನಿರ್ಮಾಣದ ಕುರಿತು ಮಾತನಾಡಿ, ''ನಮ್ಮ ಬೈಂದೂರು ಕ್ಷೇತ್ರದ ಭಾಗಗಳಲ್ಲಿ ಕಾಲು ಸಂಕಗಳೇ ಹೆಚ್ಚು. ಕಾಲು ಸಂಕವನ್ನು ದಾಟುವುದು ಮಾತ್ರವಲ್ಲ, ಅಲ್ಲಿ ಏನಾದರೂ ಅನಾಹುತಗಳಾದರೆ ಎಂಬ ಹೆದರಿಕೆಯಿಂದ ಕಾಲು ಸಂಕವನ್ನು ದಾಟುವಾಗ ಸ್ಥಳೀಯರು ಹಿಂದೇಟು ಹಾಕುತ್ತಿದ್ದರು.

ಇವಾಗ ಇಲ್ಲಿನ ಜನರು ಹೆದರಿಕೊಳ್ಳದೆ ಖುಷಿಯಿಂದ, ನಿರ್ಭೀತಿಯಿಂದ ತೆರಳುತ್ತಿದ್ದಾರೆ. ಇದು ಇಲ್ಲಿ ಮಾತ್ರವಲ್ಲದೆ ಬೈಂದೂರಿನ 3-4 ಕಡೆಗಳಲ್ಲಿ ಮಾಡಲಾಗಿದೆ. ಅಲ್ಲಿಯೂ ಯಶಸ್ವಿಯಾಗಿದೆ. ಇನ್ನು ಮುಂದೆ ಉಳಿದಿರುವ ಕಾಲು ಸಂಕಗಳಿಗೆ ಈ ರೀತಿಯ ನೂತನ ಸೇತುವೆ ವ್ಯವಸ್ಥೆ ಮಾಡುವ ಗುರಿ ಹೊಂದಿದ್ದೇವೆ'' ಎಂದು ಹೇಳಿದರು.

ಇದನ್ನೂ ಓದಿ :ಉಡುಪಿ: ಕಾಲುಸಂಕ ಇಲ್ಲದೆ ಗ್ರಾಮಸ್ಥರ ಪರದಾಟ, ಶಾಶ್ವತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಶಾಸಕ - villagers facing problem

ABOUT THE AUTHOR

...view details