ಮಂಗಳೂರು:ನಗರದ ವಾಮಂಜೂರಿನ ಸೆಕೆಂಡ್ ಬಜಾರ್ ಅಂಗಡಿಯಲ್ಲಿ ಗುಂಡು ಹಾರಿ ಎದುರುಪದವು ಮಸೀದಿ ಧರ್ಮಗುರು ಸಫ್ವಾನ್ ಎಂಬವರು ಗಾಯಗೊಂಡ ಪ್ರಕರಣದಲ್ಲಿ, ಆರೋಪಿ ರೌಡಿಶೀಟರ್ ಬದ್ರುದ್ದೀನ್ ಯಾನೆ ಅದ್ದು (35) ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಗಾಯಾಳು ಧರ್ಮಗುರುವಿನಿಂದ ಆರೋಪಿಯ ರಕ್ಷಣೆ ಯತ್ನ: ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, "ಬದ್ರುದ್ದೀನ್‌ಗೆ ಸೇರಿದ ಮಳಿಗೆಯಲ್ಲಿ ಜನವರಿ 6ರಂದು ಆಕಸ್ಮಿಕವಾಗಿ ಗುಂಡು ಹಾರಿ, ಧರ್ಮಗುರು ಸಫ್ಘಾನ್ ಗಾಯಗೊಂಡಿದ್ದರು. ಪ್ರಾರಂಭದಲ್ಲಿ, 'ಸಫ್ವಾನ್ ಗನ್ ಪರಿಶೀಲನೆ ನಡೆಸುವಾಗ ಫೈರಿಂಗ್ ಆಗಿ ಗಾಯಗೊಂಡಿರುವುದು' ಎಂದು ಪ್ರಕರಣವನ್ನು ತಿರುಚಿ ಹೇಳಲಾಗಿತ್ತು. ಆದರೆ ಪೊಲೀಸ್ ಸಿಬ್ಬಂದಿ ತನಿಖೆ ನಡೆಸಿದಾಗ ಪ್ರಕರಣದ ಸತ್ಯಾಸತ್ಯತೆ ಹೊರಬಂದಿದೆ. ಇದರಿಂದ ಗಾಯಾಳು ಸಫ್ವಾನ್ ಅವರೇ ರೌಡಿಶೀಟರ್ ಬದ್ರುದ್ದೀನ್ ಯಾನೆ ಅದ್ದುವನ್ನು ರಕ್ಷಿಸಲು ಸುಳ್ಳು ಹೇಳಿ, ದಾರಿ ತಪ್ಪಿಸಲು ಪ್ರಯತ್ನಿಸಿರುವುದು ಸ್ಪಷ್ಟವಾಗಿದೆ" ಎಂದು ತಿಳಿಸಿದ್ದಾರೆ.
ಪೊಲೀಸರ ದಾರಿ ತಪ್ಪಿಸುವ ಯತ್ನ: "ಬದ್ರುದ್ದೀನ್ ಕೈಯಿಂದಲೇ ಗುಂಡು ಹಾರಿರುವುದು ತನಿಖೆಯಿಂದ ತಿಳಿದು ಬಂದಿದೆ. ಆದರೆ ವಿಚಾರಣೆ ವೇಳೆ ಗನ್ ಬಜಪೆಯ ಭಾಸ್ಕರ್ ಅವರದ್ದು ಎಂದು ಹೇಳುವ ಮೂಲಕ ಮತ್ತೊಮ್ಮೆ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಫ್ವಾನ್ ಹೇಳಿಕೆ ಗೊಂದಲದಲ್ಲಿದ್ದ ಕಾರಣ ಬದ್ರುದ್ದೀನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಹಿರಂಗವಾಗಿದೆ" ಎಂದು ಅನುಪಮ್ ಅಗರ್ವಾಲ್ ಹೇಳಿದರು.