ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಬೋರ್​ವೆಲ್​​ಗಳ ನಿರ್ವಹಣೆಗೆ ರೋಬೋಟಿಕ್ ತಂತ್ರಜ್ಞಾನ - Bengaluru Borewells

ಬೆಂಗಳೂರಲ್ಲಿ ಜಲಮಂಡಳಿಯ 11 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಇವುಗಳಲ್ಲಿ ಹಲವು ಕೊಳವೆ ಬಾವಿಗಳು ಸಮರ್ಪಕ ನಿರ್ವಹಣೆ ಇಲ್ಲದೆ ಬತ್ತಿ ಹೋಗಿವೆ. ಕೆಲವು ತಾಂತ್ರಿಕ ಕಾರಣದಿಂದಾಗಿ ಬಳಸಲಾಗುತ್ತಿಲ್ಲ. ಅಸಮರ್ಪಕ ನಿರ್ವಹಣೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

Etv Bharat
Etv Bharat

By ETV Bharat Karnataka Team

Published : Mar 19, 2024, 11:29 AM IST

ಬೆಂಗಳೂರು:ಜಲಮಂಡಳಿಯ ಕೊಳವೆ ಬಾವಿಗಳ ಸಮರ್ಪಕ ನಿರ್ವಹಣೆಗಾಗಿ ಆಧುನಿಕ ರೋಬೋಟಿಕ್ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಸೂಚನೆ ನೀಡಿದರು.

ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಬೆಂಗಳೂರು ಕೊಳವೆ ಬಾವಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಸಮಗ್ರ ಮಾಹಿತಿಯನ್ನು ಪಡೆದುಕೊಂಡು ಮಾತನಾಡಿದ ಅವರು, ನಗರದಲ್ಲಿ ಜಲಮಂಡಳಿಯ 11 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಇವುಗಳಲ್ಲಿ ಹಲವು ಕೊಳವೆ ಬಾವಿಗಳು ಸಮರ್ಪಕ ನಿರ್ವಹಣೆ ಇಲ್ಲದೆ ಬತ್ತಿ ಹೋಗಿವೆ. ಕೆಲವು ತಾಂತ್ರಿಕ ಕಾರಣದಿಂದಾಗಿ ಬಳಸಲಾಗುತ್ತಿಲ್ಲ. ಅಸಮರ್ಪಕ ನಿರ್ವಹಣೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ನೀರು ಇಲ್ಲದೇ ಮೋಟಾರ್ ಓಡಿರುವುದರಿಂದ ಬಹಳಷ್ಟು ತಾಂತ್ರಿಕ ಸಮಸ್ಯೆ ಆಗುತ್ತಿದ್ದು, ಸರಿಯಾದ ಸಮಯದಲ್ಲಿ ರಿಪೇರಿ ಮಾಡುವುದು ಸಾಧ್ಯವಾಗುತ್ತಿಲ್ಲ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಧುನಿಕ ರೋಬೋಟಿಕ್ ತಂತ್ರಜ್ಞಾನ ಬಳಸಬೇಕು ಎಂದು ಸೂಚನೆ ನೀಡಿದರು.

ಈ ಆಧುನಿಕ ತಂತ್ರಜ್ಞಾನದಿಂದ ಪಂಪ್ ಸೆಟ್‌ಗಳ ಮಾಹಿತಿ, ನೀರಿನ ಹರಿವಿನ ಮಾಹಿತಿ, ದುರಸ್ತಿಯ ಮಾಹಿತಿ ಸೇರಿದಂತೆ ಆಟೋಮ್ಯಾಟಿಕ್ ಆಗಿ ಸ್ವಿಚ್ ಆನ್ ಮತ್ತು ಆಫ್ ಮಾಡುವುದು ಸಾಧ್ಯವಾಗುತ್ತದೆ. ಜಲಮಂಡಳಿಗೆ ಮಾಹಿತಿ ದೊರೆಯುವುದಲ್ಲದೇ ನೀರಿಲ್ಲದೇ ಇದ್ದಾಗ ಮೋಟಾರ್ ಸ್ವಯಂ ಚಾಲಿತವಾಗಿ ಆಫ್ ಆಗುವಂತೆಯೂ ಮಾಡಬಹುದಾಗಿದೆ. ಇದರಿಂದ ಆಗಾಗ ದುರಸ್ತಿಗೆ ಬರುವುದು ತಪ್ಪುವುದಲ್ಲದೇ ಸಾರ್ವಜನಿಕರಿಗೂ ತೊಂದರೆ ಆಗುವುದು ಕಡಿಮೆಯಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ನೀರು ಉಳಿಸಲು ಬೆಂಗಳೂರು ವೈದ್ಯೆಯ '4 ಸಲಹೆಗಳು'.. ಒಂದೇ ಕುಟುಂಬದಿಂದ ದಿನಕ್ಕೆ 600 ಲೀಟರ್ ನೀರು ಸೇವ್​

ಅಂತರ್ಜಲ ಕುಸಿತ ಆಗಿರುವುದರಿಂದ ಕೊಳವೆ ಬಾವಿಗಳಲ್ಲಿ ನೀರು ಕುಸಿಯುತ್ತಿದೆ. ಈ ಕೊಳವೆ ಬಾವಿಗಳನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಆಗಬೇಕಾದ ಕಾರ್ಯಗಳು, ಅವುಗಳಲ್ಲಿನ ನೀರಿನ ಲಭ್ಯತೆ, ರಿಪೇರಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಅಗತ್ಯವಿದೆ. ನಗರದಲ್ಲಿರುವ ಜಲಮಂಡಳಿಯ ಕೊಳವೆ ಬಾವಿಗಳ ಸಮೀಕ್ಷೆ ಮಾಡುವುದು ಅಗತ್ಯವಿದ್ದು, ಜಲಮಂಡಳಿಯ ಪರವಾನಗಿ ಹೊಂದಿರುವ ಬೆಂಗಳೂರು ಕೊಳವೆ ಬಾವಿ ಗುತ್ತಿಗೆದಾರ ಸಂಘದವರು ಅಧಿಕಾರಿಗಳೊಂದಿಗೆ ಜಂಟಿಯಾಗಿ ತಮ್ಮ ವ್ಯಾಪ್ತಿಯಲ್ಲಿ ಇರುವ ಕೊಳವೆ ಬಾವಿಗಳ ಮಾಹಿತಿಯನ್ನು ನೀಡಬೇಕು ಎಂದು ಸೂಚನೆ ನೀಡಿದರು.

ರಿವೈಂಡಿಂಗ್ ಸೇರಿದಂತೆ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಯಿಂದ ಸ್ಥಬ್ಧವಾಗಿರುವ ಕೊಳವೆ ಬಾವಿಗಳನ್ನು ರಿಪೇರಿ ಮಾಡಿ ಅದನ್ನು ಸುಸ್ಥಿತಿಗೆ ತರುವುದು ಮೊದಲ ಆದ್ಯತೆ ಆಗಬೇಕಾಗಿದೆ. ಇದಕ್ಕಿರುವ ಕೆಲ ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸುವಂತೆ ಗುತ್ತಿಗೆದಾರರು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಜಲಮಂಡಳಿ ಆಯುಕ್ತರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ:ಹೆಚ್ಚುತ್ತಿದೆ ತಾಪಮಾನ: ಬೇಸಿಗೆಯಲ್ಲಿ ಪ್ರತಿನಿತ್ಯ ಎಷ್ಟು ಪ್ರಮಾಣದ ನೀರು ಕುಡಿಯಬೇಕು?

ನಗರದಲ್ಲಿ ಬೀಳುವ ಮಳೆಯನ್ನು ಸರಿಯಾದ ರೀತಿಯಲ್ಲಿ ಇಂಗುವಂತೆ ಮಾಡುವ ನಿಟ್ಟಿನಲ್ಲಿ ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಉಪಯೋಗಿಸಬಹುದಾಗಿದೆ. ಬತ್ತಿ ಹೋಗಿರುವ ಹಾಗೂ ಅವುಗಳನ್ನು ಮತ್ತೆ ಸರಿಪಡಿಸಲು ಸಾಧ್ಯ ಆಗದೇ ಇರುವ ಕೊಳವೆ ಬಾವಿಗಳನ್ನು ಮಳೆ ನೀರು ಇಂಗು ಗುಂಡಿ ಆಗಿ ಬಳಸಲು, ಅದಕ್ಕೆ ಅಕ್ಕಪಕ್ಕದ ಮನೆಗಳಿಂದ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಲು ಅಗತ್ಯ ಯೋಜನೆ ರೂಪಿಸಬೇಕು ಎಂದರು.

ಜಲಮಂಡಳಿಯ ಎಂಜಿನಿಯರ್ ಇನ್ ಚೀಫ್ ಸುರೇಶ್, ಚೀಫ್ ಎಂಜಿನಿಯರ್ ಜಯಪ್ರಕಾಶ್, ಬೆಂಗಳೂರು ಕೊಳವೆಬಾವಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಯಣ್ಣ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಇದನ್ನೂ ಓದಿ:ಬೆಂಗಳೂರಿಗೆ ನಿತ್ಯ 500 ಮಿಲಿಯನ್ ಲೀಟರ್ ನೀರಿನ ಕೊರತೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details