ಯಾದಗಿರಿ:ದರೋಡೆಕೋರರ ತಂಡವೊಂದು ಸಿನಿಮೀಯ ರೀತಿಯಲ್ಲಿ ಬೊಲೆರೋ ವಾಹನ ಅಡ್ಡಗಟ್ಟಿ ಪೆಪ್ಸಿ ಬಾಟಲ್ನಿಂದ ಹೊಡೆದು, ಜೀವಬೆದರಿಕೆ ಹಾಕಿ ದರೋಡೆ ನಡೆಸಿದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಯಾದಗಿರಿ-ಶಹಾಪುರ ಮುಖ್ಯ ಹೆದ್ದಾರಿಯ ತಾಲೂಕಿನ ಚಟ್ನಳ್ಳಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಒಟ್ಟು 10 ಜನ ಭಾಗಿಯಾಗಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ 7 ಜನರಿಗಾಗಿ ಬಲೆ ಬೀಸಿದ್ದಾರೆ. ಕಳ್ಳರನ್ನು ಬಂಧಿಸಲು ಹೋದ ಪೊಲೀಸರು ಜ.21 ರಂದು 4 ಲಕ್ಷ ಹಣ ಮತ್ತು 13 ಲಕ್ಷ ಮೌಲ್ಯದ ವಿವಿಧ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ :ತೆಲಂಗಾಣದ ಸೂರ್ಯಪೇಟ ಪಟ್ಟಣದಿಂದ ಕಳೆದ ಜ.3ರಂದು ಶಹಾಪುರದ ಜಾನುವಾರಗಳ ಸಂತೆಗೆ ಬಂದಿದ್ದ ವ್ಯಾಪಾರಿಗಳ ಮೇಲೆ ತಾಲೂಕಿನ ಚಟ್ನಳ್ಳಿ ಕ್ರಾಸ್ ಗುಂಡಳ್ಳಿ ತಾಂಡಾ ಬಳಿ ದರೋಡೆಕೋರರ ತಂಡ ಗಾಜಿನ ಬಾಟಲ್‌ಗಳಿಂದ ಬೆಳಗಿನ ಜಾವ 3ರ ಹೊತ್ತಿಗೆ ದಾಳಿ ನಡೆಸಿತ್ತು. 4 ಲಕ್ಷ ರೂ. ನಗದು ಹಣ ಕಸಿದು ಪರಾರಿಯಾಗಿದ್ದರು. ಇಬ್ಬರು ಕುರಿ ವ್ಯಾಪಾರಿಗಳ ಬಳಿಯಿದ್ದ ಮೊಬೈಲ್ ಸಿಮ್ ಮುರಿದು ಬಿಸಾಕಿ, ಮೊಬೈಲ್ ಮಾತ್ರ ಕೊಟ್ಟು ದುಡ್ಡು ತೆಗೆದುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.