ಮಂಗಳೂರಿನಲ್ಲಿ ಮತ್ತೊಂದು ಮನೆ ದರೋಡೆ ಪ್ರಕರಣ (ETV Bharat) ಮಂಗಳೂರು: ಮನೆಯಲ್ಲಿದ್ದ ವೃದ್ಧರನ್ನು ಕೂಡಿ ಹಾಕಿ ಹಲ್ಲೆ ನಡೆಸಿ ದರೋಡೆಗೈದ ಬಳಿಕ ಮನೆ ಮಾಲೀಕನ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಇಂದು ಬೆಳಗ್ಗೆ ನಗರದ ಬಿಜೈ ಕಾಪಿಕಾಡ್ ಹತ್ತಿರದ ದಡ್ಡಲ್ ಕಾಡು ಬಳಿ ನಡೆದಿದೆ. ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೋಟೆಕಣಿ 1ನೇ ಕ್ರಾಸ್ನ ಕರೀಷ್ಮಾ ಎನ್ನುವ ಮನೆಯಲ್ಲಿ ಮುಂಜಾನೆ 3.30ರ ಸುಮಾರಿಗೆ ಘಟನೆ ನಡೆದಿದೆ.
ದರೋಡೆ ವಿಕ್ಟರ್ ಮೆಂಡೋನ್ಸಾ (71) ಮತ್ತು ಪ್ಯಾಟ್ರಿಷಾ ಮೆಂಡೋನ್ಸಾ (60) ಎಂಬ ವೃದ್ಧ ದಂಪತಿ ಮಾತ್ರ ಮನೆಯಲ್ಲಿದ್ದರು. ಇವರ ಇಬ್ಬರು ಮಕ್ಕಳು ವಿದೇಶದಲ್ಲಿದ್ದಾರೆ. ಬೆಡ್ ರೂಂನ ಕಿಟಕಿ ತುಂಡರಿಸಿ ಮನೆಯೊಳಗೆ ಬಂದು ದರೋಡೆ ಮಾಡಲಾಗಿದೆ. ಇಬ್ಬರು ವೃದ್ಧರ ಮೇಲೂ ದರೋಡೆಕೋರರು ಹಲ್ಲೆ ನಡೆಸಿ ಗಾಯಗೊಳಿಸಿದ್ದು, ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಖದೀಮರ ತಂಡದಲ್ಲಿ ನಾಲ್ವರಿದ್ದರು ಎಂದು ತಿಳಿದುಬಂದಿದೆ. ಮನೆಯವರಿಗೆ ಮಾರಕಾಯುಧ ತೋರಿಸಿ, ಹಲ್ಲೆ ನಡೆಸಿ ಕೃತ್ಯ ಎಸಗಿದ್ದಾರೆ. ಬಳಿಕ ಮನೆಯ ಕಾರಿನ ಕೀ ಪಡೆದು ಅದೇ ಕಾರಿನಲ್ಲಿ ಉಡುಪಿಯತ್ತ ತೆರಳಿದ್ದಾರೆ. ಹೆಜಮಾಡಿ ಟೋಲ್ ಗೇಟ್ ಸಮೀಪ ಕಾರು ನಿಲ್ಲಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಉರ್ವ ಪೊಲೀಸರು, ಹಿರಿಯ ಅಧಿಕಾರಿಗಳು, ಬೆರಳಚ್ಚು ತಜ್ಞರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುಲ್ಕಿ ಪೊಲೀಸರು ಕಾರನ್ನು ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಬೆನ್ನಲ್ಲೇ ಪೊಲೀಸರು ದರೋಡೆಗೈದ ಮನೆಯ ಸುತ್ತಮುತ್ತ, ರಸ್ತೆ, ಹೆದ್ದಾರಿಯ ಸಿಸಿಟಿವಿ ಕ್ಯಾಮೆರಾಗಳನ್ನು ಶೋಧಿಸುತ್ತಿದ್ದಾರೆ.
ಇದನ್ನೂ ಓದಿ:ಮಂಗಳೂರು: ಮನೆಮಂದಿ ಇದ್ದಾಗಲೇ ಕಿಟಕಿ ಸರಳು ತುಂಡರಿಸಿ ಒಳನುಗ್ಗಿದ ಕಳ್ಳರು - House Theft