ಕರ್ನಾಟಕ

karnataka

ಕಣ್ಣಿಗೆ ಕಾರದ ಪುಡಿ ಎರಚಿ ಸಿನಿಮೀಯ ರೀತಿಯಲ್ಲಿ ದರೋಡೆ: ಹೆಡ್ ಕಾನ್ಸ್​ಟೇಬಲ್​ ಸೇರಿ ಏಳು ಆರೋಪಿಗಳ ಬಂಧನ - Robbery Case

By ETV Bharat Karnataka Team

Published : 4 hours ago

ದರೋಡೆ ಪ್ರಕರಣ ಬಯಲಿಗೆಳೆದ ಬಳ್ಳಾರಿ ಜಿಲ್ಲಾ ಪೊಲೀಸರು, ಬ್ರೂಸ್ ಪೇಟೆ ಪೊಲೀಸ್​ ಠಾಣೆ ಹೆಡ್ ಕಾನ್ಸ್​ಟೇಬಲ್​ ಹಾಗೂ ಹೋಂ‌ ಗಾರ್ಡ್ ಸೇರಿ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ROBBERY CASE
ಬಂಧಿತ ಆರೋಪಿಗಳು (ETV Bharat)

ಬಳ್ಳಾರಿ:ಕಣ್ಣಿಗೆ ಕಾರದ ಪುಡಿ ಎರಚಿ ಸಿನಿಮೀಯ ರೀತಿಯಲ್ಲಿ ಪೊಲೀಸರ ನೆರವಿನಲ್ಲಿಯೇ ನಡೆಯುತ್ತಿದ್ದ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ‌ ಹೇಳಿದರು.

ಸುದ್ದಿಗೋಷ್ಠಿ ನಡೆಸಿದ ಅವರು, ದರೋಡೆ ಪ್ರಕರಣಲ್ಲಿ ಭಾಗಿಯಾದ ಹೆಡ್ ಕಾನ್ಸ್​ಟೇಬಲ್, ಹೋಂ ಗಾರ್ಡ್​ ಸಹಿತ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಸಿನಿಮೀಯ ರೀತಿಯಲ್ಲಿ ನಡೆದ ದರೋಡೆ ಪ್ರಕರಣ ಬಯಲಿಗೆಳೆಯಲಾಗಿದ್ದು, ಇಲಾಖೆಯ ಸಿಬ್ಬಂದಿ ಪ್ರಕರಣದಲ್ಲಿ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳಿಂದ ಭಾರಿ ಮೊತ್ತದ ನಗದು ಸೇರಿದಂತೆ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಪೊಲೀಸ್ ಇಲಾಖೆಗೆ ಎಚ್ಚರಿಕೆ ಸಂದೇಶ ಕೂಡ ನೀಡಲಾಗಿದೆ ಎಂದರು.

ಕಣ್ಣಿಗೆ ಕಾರದ ಪುಡಿ ಎರಚಿ ಸಿನಿಮೀಯ ರೀತಿಯಲ್ಲಿ ದರೋಡೆ: ಹೆಡ್ ಕಾನ್ಸ್​ಟೇಬಲ್​ ಸೇರಿ ಏಳು ಆರೋಪಿಗಳ ಬಂಧನ (ETV Bharat)

ಏನಿದು ಪ್ರಕರಣ?: ರಘು ಎಂಬ ಬಂಗಾರ ಅಂಗಡಿಯ ಮಾಲೀಕ ‌ಇತ್ತೀಚೆಗೆ ಬೈಕ್ ಮೇಲೆ 22 ಲಕ್ಷ 99 ಸಾವಿರ ನಗದು ಮತ್ತು 318 ಗ್ರಾಂ ಬಂಗಾರ ತೆಗೆದುಕೊಂಡು ಹೋಗುತ್ತಿದ್ದ. ಆಂಧ್ರ ಗಡಿಯ ರಾಯದುರ್ಗಾ ಬಸ್ ನಿಲ್ದಾಣದ ಕಡೆ ಹೋಗುತ್ತಿರುವಾಗ ಅವರಿಗೆ ಕಣ್ಣಿಗೆ ಕಾರದ ಪುಡಿ ಎರಚಿ ಹಣ, ಒಡೆವೆ ದರೋಡೆ ಮಾಡಲಾಗಿತ್ತು. ಪ್ರಮುಖ ಆರೋಪಿ ತೌಸೀಫ್ ಜಾವೀದ್, ಪೀರ್, ದಾದಾ ಖಲಂದರ್, ಮುಸ್ತಕ್ ಅಲಿ ರೆಹಮಾನ್, ಆರೀಫ್ ಖದೀಮರಿದ್ದ ತಂಡ, ಸಿನಿಮೀಯ ರೀತಿಯಲ್ಲಿ ಈ ದರೋಡೆ‌ ಮಾಡಿತ್ತು. ಕಳ್ಳರು ಸೆರೆ ಸಿಕ್ಕಾಗ ಈ ಕಳ್ಳತನಕ್ಕೆ ಬ್ರೂಸ್ ಪೇಟ್ ಠಾಣೆಯ ಹೆಡ್ ಕಾನ್ಸ್​ಟೇಬಲ್​ ಸಾಥ್ ನೀಡಿದ್ದರು ಎಂಬ ಸತ್ಯ ತನಿಖೆ ವೇಳೆ ಬಯಲಾಗಿತ್ತು.

ಹೆಡ್ ಕಾನ್ಸ್​ಟೇಬಲ್ ಮಹಬೂಬ್ ಪಾಷಾ ಮತ್ತು ಪ್ರಮುಖ ಆರೋಪಿ ಆರೀಫ್ ಆತ್ಮೀಯ ಗೆಳೆಯರು. ಆ ಸಲುಗೆಯಿಂದಲೇ ಮೊದಲೇ ದರೋಡೆ ಮಾಡುವ ಪ್ಲಾನ್ ಮಾಡಿದ್ದರು. ಆರೋಪಿಗಳನ್ನು ಬಂಧಿಸಿದಾಗ ಹೆಡ್ ಕಾನ್ಸ್​ಟೇಬಲ್ ಪಾತ್ರ ಇರುವುದು ಗೊತ್ತಾಗಿದೆ. ದರೋಡೆ ಹಣದಲ್ಲಿ ಮೆಹಬೂಬ್ ಒಂಬತ್ತು ಲಕ್ಷ ಹಣ ಪಡೆದಿದ್ದ. ಸದ್ಯ 15 ಲಕ್ಷದ 91 ಸಾವಿರ ನಗದು, 116 ಗ್ರಾಂ ಬಂಗಾರ ರಿಕವರಿ ಮಾಡಲಾಗಿದೆ. ಪ್ರಮುಖ ಆರೋಪಿ ಆರೀಫ್ ಮತ್ತು ಮೆಹಬೂಬ್ ಸೇರಿ ಏಳು ಜನರ ಖದೀಮರನ್ನು ಬಂಧಿಸಲಾಗಿದೆ. ಆರೀಪ್ ಈ ಮೊದಲು ಹೋಮ್ ಗಾರ್ಡ್ ಕೆಲಸ ಮಾಡುತ್ತಿದ್ದ. ಮೆಹಬೂಬ್ ಪಾಷಾನನ್ನು ಅಮಾನತು ಅಷ್ಟೇ ಅಲ್ಲದೇ ಬಂಧನ ಕೂಡ ಮಾಡಲಾಗಿದೆ ಎಂದು ಡಾ.ಶೋಭರಾಣಿ‌ ಹೇಳಿದರು.

ಇದನ್ನೂ ಓದಿ:ಬೆಂಗಳೂರು: ತಲ್ವಾರ್ ತೋರಿಸಿ ಡೆಲಿವರಿ ಬಾಯ್‌ಗಳನ್ನು ದೋಚುತ್ತಿದ್ದ ಮೂವರ ಬಂಧನ - Robbery Case

ABOUT THE AUTHOR

...view details