ಬೆಂಗಳೂರು:ಚಿನ್ನದಂಗಡಿಯಲ್ಲಿ ಪಿಸ್ತೂಲ್ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸುವಲ್ಲಿ ಕೊಡಿಗೆಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಖಾನಾ ಶರ್ಮಾ (23), ಅಶು ಶರ್ಮಾ (27), ಪ್ರದೀಪ್ ಶರ್ಮಾ (37) ಹಾಗು ವಿಕಾಸ್ ಪಂಡಿತ್ (32) ಬಂಧಿತರು. ಸೂರಜ್ (30) ಎಂಬಾತ ಸಾವನ್ನಪ್ಪಿದ್ದಾನೆ.
ಪ್ರಕರಣದ ವಿವರ: ಮಾರ್ಚ್ 14ರಂದು ಹಾಡಹಗಲೇ ಕೊಡಿಗೆಹಳ್ಳಿಯ ದೇವಿನಗರದ ಲಕ್ಷ್ಮಿ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲ್ಲರ್ಸ್ ಶಾಪ್ಗೆ ಬಂದಿದ್ದ ಆರೋಪಿಗಳು ಮಾಲಿಕ ಮತ್ತು ಅಂಗಡಿ ಸಿಬ್ಬಂದಿಯನ್ನು ಬೆದರಿಸಿ ಚಿನ್ನ ಕದಿಯಲು ಯತ್ನಿಸಿದ್ದರು. ಆದರೆ ಮಾಲಿಕ ಮತ್ತು ಸಿಬ್ಬಂದಿಯ ಪ್ರತಿರೋಧದಿಂದ ಚಿನ್ನಾಭರಣ ಕದಿಯಲು ಸಾಧ್ಯವಾಗದಿದ್ದಾಗ ಪಿಸ್ತೂಲ್ನಿಂದ ಗುಂಡು ಹಾರಿಸಿ, ಪಿಸ್ತೂಲ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು, ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಬೆರಳಚ್ಚು ಮಾದರಿ ಆಧರಿಸಿ ತನಿಖೆ ಆರಂಭಿಸಿದಾಗ ಆರೋಪಿಗಳು ಮಧ್ಯಪ್ರದೇಶ ಮೂಲದವರು ಹಾಗೂ ಈ ಹಿಂದೆ ಮಧ್ಯಪ್ರದೇಶದಲ್ಲೂ ಕೂಡ ಹತ್ತಾರು ಬಾರಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಾಡು ಹಿಡಿದು ಹೊರಟ ಪೊಲೀಸರಿಗೆ ಗ್ವಾಲಿಯರ್‌ನಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದರು.