ಬೆಂಗಳೂರು:ನಡುರಸ್ತೆಯಲ್ಲಿ ಕಾರು ಅಡ್ಡಗಟ್ಟಿದ ಇಬ್ಬರು ಯುವಕರು, ಸಹ ಸವಾರರ ಎದುರೇ ಕಾರಿನ ಬಾನೆಟ್ ಮೇಲೆ ಹತ್ತಿ, ಕಾರಿನ ವಿಂಡ್ ಶೀಲ್ಡ್‌ಗೆ ಕಾಲಿನಿಂದ ಒದ್ದು ಪುಂಡಾಟ ಪ್ರದರ್ಶಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಡಿಸೆಂಬರ್ 28ರಂದು ಕೋರಮಂಗಲ ಬಳಿ ಘಟನೆ ನಡೆದಿದೆ. ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ವಿಡಿಯೋವನ್ನು ಎಕ್ಸ್ ಆ್ಯಪ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಚಾಲಕ ಏಕಾಏಕಿ ತನ್ನ ಕಾರನ್ನು ರಸ್ತೆಗೆ ಇಳಿಸಿದ್ದು, ಅಜಾಗರೂಕತೆ ಹಾಗೂ ಅತಿವೇಗದಿಂದ ಚಲಾಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ದ್ವಿಚಕ್ರ ವಾಹನದಲ್ಲಿ ಕಾರನ್ನು ಬೆನ್ನತ್ತಿ ಬಂದ ಇಬ್ಬರು ಯುವಕರು ಸಿಗ್ನಲ್‌ನಲ್ಲಿ ಕಾರನ್ನು ಅಡ್ಡಗಟ್ಟಿದ್ದಾರೆ. ಇಬ್ಬರ ಪೈಕಿ ಓರ್ವ ಕಾರು ಚಾಲಕನನ್ನು ಕೆಳಗಿಳಿಯುವಂತೆ ಒತ್ತಾಯಿಸಿದ್ದಾನೆ. ಮತ್ತೋರ್ವ ನೋಡ ನೋಡುತ್ತಿದ್ದಂತೆ ಕಾರಿನ ಬಾನೆಟ್ ಮೇಲೇರಿ, ವಿಂಡ್ ಶೀಲ್ಡ್‌ಗೆ ಕಾಲಿನಿಂದ ಒದ್ದು ಆಕ್ರೋಶ ಹೊರಹಾಕಿದ್ದಾನೆ. ಬಳಿಕ ಸಿಗ್ನಲ್ ತೆರವಾಗುತ್ತಿದ್ದಂತೆ ಕಾರಿನ ಚಾಲಕ ಪುನಃ ಅಜಾಗರೂಕತೆಯಿಂದ ವೇಗವಾಗಿ ಕಾರು ಚಲಾಯಿಸಿಕೊಂಡು ಮುಂದೆ ಸಾಗಿದ್ದಾನೆ. ಇವೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದೆ.