ಮಂಗಳೂರು(ದಕ್ಷಿಣ ಕನ್ನಡ):ಬಾಲ್ಯ ವಿವಾಹ ಪ್ರಕರಣದಲ್ಲಿ ಅಪರಾಧ ಎಸಗಿದ ಬಾಲಕಿಯ ಪತಿ, ತಂದೆ-ತಾಯಿ ಮತ್ತು ಅತ್ತೆ-ಮಾವ ಅವರುಗಳಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಒಟ್ಟು 35,000 ರೂಪಾಯಿ ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ-2 ಪೊಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಮಂಗಳೂರಿನ ಮೊಂಟೆಪದವಿನ ಮೊಹಮ್ಮದ್ ಇಂತಿಯಾಜ್ ಯಾನೆ ಇಮ್ಮಿಯಾಜ್ (29), ಬಂಟ್ವಾಳದ ರಾಮಲ್ ಕಟ್ಟೆಯ ಅಬ್ದುಲ್ ಖಾದರ್ (41) ರಮ್ಲತ್ (43), ಮಂಜನಾಡಿಯ ಜೆ.ಐ.ಮೊಹಮ್ಮದ್ ಮತ್ತು ಮೈಮುನಾ ಶಿಕ್ಷೆಗೊಳಗಾದ ಅಪರಾಧಿಗಳು.
ಈ ಪ್ರಕರಣದಲ್ಲಿ ಆರೋಪಿ ಮೊಹಮ್ಮದ್ ಇಂತಿಯಾಝ್ ಬಾಲಕಿಯ ಗಂಡ. 2023 ಮೇ 31ರಂದು ಅಪ್ರಾಪ್ತೆಗೆ 17 ವರ್ಷ ಪ್ರಾಯವಾಗಿರುವಾಗ ತಂದೆ-ತಾಯಿ ಮೊಹಮ್ಮದ್ ಇಂತಿಯಾಝ್ನೊಂದಿಗೆ ಬಾಲಕಿಯನ್ನು ಮದುವೆ ಮಾಡಿಕೊಟ್ಟಿದ್ದರು. 2023 ಜೂನ್ 1ರಂದು ಉಳ್ಳಾಲ ತಾಲೂಕು ಕೈರಂಗಳ ಗ್ರಾಮದ ನಂದರಪದವು ಎಂಬಲ್ಲಿರುವ ಎಸ್.ಕೆ.ಮಲ್ಟಿಪರ್ಪಸ್ ಹಾಲ್‌ನಲ್ಲಿ ಔತಣಕೂಟ ಏರ್ಪಡಿಸಿದ್ದರು. ಬಾಲಕಿಗೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಿರುವ ಕಾರಣಕ್ಕೆ ಆರೋಪಿಗಳ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.