ಚಾಮರಾಜನಗರ:ಅರಣ್ಯ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿಪಡಿಸಲು ಲಂಚ ಕೇಳಿದ ಆರ್ಎಫ್ಒ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ. ಮಲೆಮಹದೇಶ್ವರ ವನ್ಯಜೀವಿಧಾಮದ ಕೌದಳ್ಳಿ ಆರ್ಎಫ್ಒ ಕಾಂತರಾಜ್ ಚೌಹಾಣ್ ಲಂಚ ಕೇಳಿದ ಆರೋಪಿ.
ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ ರೋಡ್ ಅರಣ್ಯ ಪ್ರದೇಶ ವ್ಯಾಪ್ತಿಯ ಮೊರನೂರು ಹುಣಸೆ ಮರ ಬಾವಿಯ ಸಮೀಪ 10 ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಲ್ಲಿಸಿ, ಅನುಮೋದನೆ ಪಡೆಯಲಾಗಿತ್ತು. ಆದರೆ, ವಲಯ ಅರಣ್ಯಾಧಿಕಾರಿ ಕಾಂತರಾಜ್ ಚೌಹಾಣ್ ಕಾಮಗಾರಿ ನಡೆಸಬೇಕಾದರೆ ತನಗೆ 80 ಸಾವಿರ ರೂ. ನೀಡಬೇಕು. ಇಲ್ಲದಿದ್ದರೆ, ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ತಮ್ಮ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಗ್ರಾ.ಪಂ. ಸದಸ್ಯ ಜೋಸೆಫ್ ಆಳ್ಬಗನ್ ದೂರು ನೀಡಿದ್ದರು.
ಜೋಸೆಫ್ ಆಳ್ಬಗನ್ ಚಾಮರಾಜನಗರ ಲೋಕಾಯುಕ್ತ ಕಚೇರಿಗೆ ದೂರು ನೀಡುವ ವೇಳೆ, ಈಗಾಗಲೇ ವಲಯ ಅರಣ್ಯಾಧಿಕಾರಿಗೆ ಮುಂಗಡ ಹಣವಾಗಿ 20 ಸಾವಿರ ರೂ. ನೀಡಿರುವುದಾಗಿಯೂ ಮಾಹಿತಿ ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಉಳಿದ 60 ಸಾವಿರ ರೂ ನಗದು ಹಣ ನೀಡುವಾಗ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.
ಆರ್ಎಫ್ಒ ಕಾಂತರಾಜ್ ಚೌಹಾಣ್ (ETV Bharat) ಇ-ಸ್ವತ್ತಿಗೆ ಲಂಚ, ಪಿಡಿಒ ಸೆರೆ:ಜಮೀನಿನ ಇ-ಸ್ವತ್ತಿಗೆ ಲಂಚ ಸ್ವೀಕರಿಸುತ್ತಿದ್ದ ಪಿಡಿಒವೋರ್ವರನ್ನು ಲೋಕಾಯುಕ್ತ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ. ಆರೋಪಿಯಿಂದ 4 ಸಾವಿರ ರೂ. ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ.
ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಕುಳ್ಳೇಗೌಡ ಎಂಬವರು ಹಣ ಸ್ವೀಕರಿಸುವಾಗ ಸಿಕ್ಕಿಬಿದ್ದವರು. ಸಾಲಿಗ್ರಾಮದ ನಿವಾಸಿ ಆರ್.ಡಿ.ಭಾಸ್ಕರ್ ತಮಗೆ ಸೇರಿದ ಜಮೀನಿನ ಇ- ಸ್ವತ್ತು ಮಾಡಿಕೊಡಲು ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪಿಡಿಒ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಅಶೋಕ್ ಕುಮಾರ್, ರೂಪಶ್ರೀ, ರವಿ ಕುಮಾರ್, ಸಿಬ್ಬಂದಿ ಲೋಕರಾಜೇ ಅರಸ್, ಮೋಹನ್ ಕುಮಾರ್, ಮೋಹನ್ ಗೌಡ, ನೇತ್ರಾವತಿ, ವೀಣಾ, ತ್ರಿವೇಣಿ, ಪರಶುರಾಮ್, ಶೇಖರ್, ದಿನೇಶ್ ಇದ್ದರು.
50 ಸಾವಿರ ರೂ. ಲಂಚ ಕೇಳಿದ್ದ ಪಿಡಿಒ ಬಲೆಗೆ: ಚರಂಡಿ ಪೈಪ್‌ಲೈನ್ ಕಾಮಗಾರಿಗೆ ಬಿಲ್ ಮಾಡಿಕೊಡಲು 50 ಸಾವಿರ ರೂ. ಲಂಚ ಕೇಳಿದ್ದ ಪಿಡಿಒ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ. ಮೈಸೂರು ತಾಲೂಕಿನ ಉದ್ಬೂರು ಗ್ರಾ.ಪಂ. ಪಿಡಿಒ ಕಿರಣ್ ಆರ್.ಜಹಗೀರ್ ಧಾರ್ ಬಂಧಿತರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಸಿಸಿ ಚರಂಡಿ ಮತ್ತು ಪೈಪ್‌ಲೈನ್ ಕಾಮಗಾರಿಯನ್ನು ಗುತ್ತಿಗೆದಾರ ಶಂಕರ್ ನಿರ್ವಹಿಸಿದ್ದು, ಬಿಲ್ ಪಾವತಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕಿರಣ್ ಆರ್. ಜಹಗೀರ್ ಧಾರ್ 50 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಗುತ್ತಿಗೆದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಮೈಸೂರಿನ ಹೋಟೆಲ್ ಬಳಿ 25 ಸಾವಿರ ರೂ. ಲಂಚ ಪಡೆಯುವಾಗ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ :ಜಮೀನು ಪೋಡಿಗೆ ₹1.5 ಲಕ್ಷ ಲಂಚ: ಭೂಮಾಪನಾ ಇಲಾಖೆ ಡಿಡಿಎಲ್‌ಆರ್, ಸರ್ವೇಯರ್ ಸೆರೆ - Lokayukta Raid