ಬೆಂಗಳೂರು: ಫುಡ್ ಡೆಲಿವರಿ ಬಾಯ್ ಮೇಲೆ ರೆಸ್ಟೋರೆಂಟ್ ಸಿಬ್ಬಂದಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಫೆಬ್ರವರಿ 2ರಂದು ರಾತ್ರಿ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯ ಎದುರಿನಲ್ಲಿರುವ ಗಬ್ರು ಬಿಸ್ಟ್ರೋ ಅಂಡ್ ಕೆಫೆಯಲ್ಲಿ ಘಟನೆ ನಡೆದಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಹಕರು ಆರ್ಡರ್ ಮಾಡಿದ್ದ ಫುಡ್ ನೀಡಲು ರೆಸ್ಟೋರೆಂಟ್ ಸಿಬ್ಬಂದಿ ವಿಳಂಬ ಮಾಡಿದ್ದಾರೆ. ಪದೇ ಪದೆ ಗ್ರಾಹಕರಿಂದ ಕರೆಗಳು ಬರುತ್ತಿದ್ದರಿಂದ ತನ್ನ ಕರ್ತವ್ಯದ ತುರ್ತು ಸ್ಥಿತಿಯನ್ನು ಅರ್ಥ ಮಾಡಿಕೊಂಡ ಡೆಲಿವರಿ ಬಾಯ್, 'ಸಮಯಕ್ಕೆ ಸರಿಯಾಗಿ ಫುಡ್ ಡೆಲಿವರಿ ಮಾಡಲು ಸಾಧ್ಯವಾಗುವಂತೆ ಬೇಗನೆ ಫುಡ್ ನೀಡುವಂತೆ' ರೆಸ್ಟೋರೆಂಟ್ ಸಿಬ್ಬಂದಿ ಬಳಿ ಕೇಳಿದ್ದಾನೆ. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿ ಹಾಗೂ ಡಿಲೆವರಿ ಬಾಯ್ ನಡುವೆ ಮಾತಿಗೆ ಮಾತು ಬೆಳೆದಿದೆ. ನೋಡ ನೋಡುತ್ತಿದ್ದಂತೆ ಗ್ರಾಹಕರ ಕಣ್ಣೆದುರೇ ಫುಡ್ ಡೆಲಿವರಿ ಬಾಯ್ ಮೇಲೆ ಮುಗಿಬಿದ್ದ ನಾಲ್ಕೈದು ಜನ ರೆಸ್ಟೋರೆಂಟ್ ಸಿಬ್ಬಂದಿ, ಆತನನ್ನ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರೆಸ್ಟೋರೆಂಟ್ ಸಿಬ್ಬಂದಿಯ ಹಿಂಸಾತ್ಮಕ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.