ಬೆಂಗಳೂರು: ಖಾಸಗಿ ಉದ್ಯಮಗಳಲ್ಲಿ ಕೂಡ ಕನ್ನಡಿಗರಿಗೆ ಕೆಲವು ಶ್ರೇಣಿಯ ಹುದ್ದೆಗಳನ್ನು ನೂರಕ್ಕೆ ನೂರರಷ್ಟು ಮೀಸಲಿಡಲಾಗುವುದು. ಇದೇ ಸಂದರ್ಭದಲ್ಲಿ ಉದ್ಯಮಗಳ ಹಿತಾಸಕ್ತಿಗಳನ್ನು ಸಹ ಕಾಪಾಡಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಸಂಬಂಧ ಸರಕಾರವು ವಿಧೇಯಕಕ್ಕೆ ಅನುಮೋದನೆ ನೀಡಿದೆ. ಈ ವಿಚಾರವಾಗಿ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿ-ಬಿಟಿ, ಕಾನೂನು ಮತ್ತು ಕಾರ್ಮಿಕ ಸಚಿವರುಗಳ ಜೊತೆ ಚರ್ಚಿಸಿ, ಗೊಂದಲಗಳಿಗೆ ತೆರೆ ಎಳೆಯಲಾಗುವುದು ಎಂದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಲೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಕೌಶಲಗಳಿಲ್ಲದ ಕನ್ನಡಿಗರಿಗೆ ಕೌಶಲ್ಯ ನೀಡಿ ಸಜ್ಜುಗೊಳಿಸುವ ಕೆಲಸವನ್ನೂ ಸರಕಾರವೇ ಮಾಡಲಿದೆ. ತಯಾರಿಕಾ ವಲಯ ಮತ್ತು ಕೈಗಾರಿಕಾ ಕ್ರಾಂತಿಯ ಉಜ್ವಲ ಅವಕಾಶಗಳನ್ನು ನಾವು ಕಳೆದುಕೊಳ್ಳುವಂತಿಲ್ಲ ಎಂದು ಅವರು ಪ್ರತಿಪಾದಿಸಿದರು.