ಮೈಸೂರು: ಚೊಚ್ಚಲ ಖೋಖೋ ವಿಶ್ವಕಪ್ ಗೆದ್ದ ಚಾಂಪಿಯನ್ಸ್, ಭಾರತೀಯ ತಂಡಗಳ ಅಮೋಘ ಸಾಧನೆ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಯುವತಿ ಚೈತ್ರ.ಬಿ ಅವರು ವಿಶ್ವವಿಜೇತ ಮಹಿಳಾ ಖೋಖೋ ತಂಡದ ಭಾಗವಾಗಿರುವುದು ನಾಡಿಗೆ ಹೆಮ್ಮೆಯ ಸಂಗತಿ. ಭಾರತೀಯರ ಪಾಲಿಗೆ ಇದೊಂದು ಐತಿಹಾಸಿ ಘಟನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಸಂತಸ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಲ್ಲಾಡಳಿತ ವತಿಯಿಂದ, ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಜರುಗಿತು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ರಾಷ್ಟ ಧ್ವಜಾರೋಹಣ ನೆರವೇರಿಸಿ, ಗಾಂಧಿ ಮತ್ತು ಅಂಬೇಡ್ಕರ್ ಭಾವಚಿತ್ರಗಳಿಗೆ ಪುಪ್ಪಾರ್ಚನೆ ಸಲ್ಲಿಸಿದ ನಂತರ ಮಾತನಾಡಿದರು.
"ಹೃದಯ ಜ್ಯೋತಿ" ಹೊಸ ಯೋಜನೆ: "2024-25ನೇ ಸಾಲಿನಲ್ಲಿ ಹೊಸದಾಗಿ 23 ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ರೋಗಿಗಳ ಪಟ್ಟಿ 95ರಿಂದ ಶೂನ್ಯಕ್ಕೆ ತಲುಪಿದೆ. "ಹೃದಯ ಜ್ಯೋತಿ" ಎಂಬ ಹೊಸ ಯೋಜನೆಯನ್ನು ಡಾ.ಪುನೀತ್ ರಾಜ್ಕುಮಾರ್ ಹೆಸರಿನಡಿ "ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ" ಎಂದು ಆರಂಭಿಸಿದ್ದು, 75,720 ಇಸಿಜಿ ಪರೀಕ್ಷೆ ಮಾಡಿಲಾಗಿದೆ. ಈ ಯೋಜನೆಯಡಿಯಲ್ಲಿ 692 ಜೀವ ರಕ್ಷಣೆ ಮಾಡಲಾಗಿದೆ" ಎಂದು ತಿಳಿಸಿದರು.