ಬೆಳಗಾವಿ/ಶಿವಮೊಗ್ಗ:ರಾಜ್ಯಾದ್ಯಂತ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಆಯಾ ಜಿಲ್ಲಾ ಕೇಂದ್ರ, ತಾಲೂಕುಗಳಲ್ಲಿ ಸಚಿವರು, ಶಾಸಕರು ಸೇರಿದಂತೆ ಗಣ್ಯರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಬೆಳಗಾವಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಸತೀಶ ಜಾರಕಿಹೊಳಿ:ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮೊದಲು ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ನಂತರ ಪೊಲೀಸ್, ಸ್ಕೌಟ್ ಆಂಡ್ ಗೈಡ್, ಎನ್‌ಸಿಸಿ ಸೇರಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ತೆರೆದ ವಾಹನದಲ್ಲಿ ಸತೀಶ ಜಾರಕಿಹೊಳಿ ಅವರು ಪೊಲೀಸ್ ಮತ್ತು ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಅವರು, ಬೆಳಗಾವಿಯ ಈ ನೆಲವು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾತ್ಮರು ನಡೆದಾಡಿದ ನೆಲವಾಗಿದೆ. ಭಾರತ ರಾಷ್ಟ್ರವು ಗಣರಾಜ್ಯವೆಂದು 1950ರ ಜನವರಿ 26ರಂದು ಘೋಷಿಸಿಕೊಂಡಿತು. ಈ ದಿನವು ದೇಶದ ನಾಗರಿಕರಿಗೆ ರಾಷ್ಟ್ರದ ಜವಾಬ್ದಾರಿಯನ್ನು ನೀಡಿದ ದಿನವಾಗಿದೆ. ನಮ್ಮ ಸಂವಿಧಾನವನ್ನು ಒಪ್ಪಿಕೊಂಡ ದಿನವಿದು. ಗಣತಂತ್ರ ವ್ಯವಸ್ಥೆಯು ಭಾರತೀಯರಿಗೆ ಸಾರ್ವಭೌಮಾಧಿಕಾರವನ್ನು ಕಲ್ಪಿಸಿಕೊಟ್ಟ ದಿನವಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರಂಥಹ ಮಹಾನ್ ಮಾನವತಾವಾದಿಗಳು ರಾಷ್ಟ್ರದ ಅಭಿವೃದ್ಧಿಯ ಬಗೆಗೆ ಹಗಲಿರುಳೆನ್ನದೆ ಚಿಂತಿಸಿ ರಚಿಸಿದ ಸಂವಿಧಾನವು ಭವ್ಯಭಾರತಕ್ಕೆ ದಾರಿದೀಪವಾಗಿದೆ ಎಂದರು.
ಚಾಮರಾಜನಗರದಲ್ಲಿ ಗಣರಾಜ್ಯೋತ್ಸವ:ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ವಿವಿಧ ಪೊಲೀಸ್ ತುಕಡಿಗಳು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಬಳಿಕ ಭಾಷಣ ಮಾಡಿದ ಸಚಿವ ಕೆ.ವೆಂಕಟೇಶ್, ಎಲ್ಲರಿಗೂ 76ನೇ ಗಣರಾಜ್ಯೊತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಸ್ವಾತಂತ್ರ್ಯ ಹೋರಾಟಗಾರರ ಅವಿರತ ಪ್ರಯತ್ನದ ಫಲವಾಗಿ ನಮ್ಮ ದೇಶ ಬ್ರಿಟಿಷರ ಕಪಿಮುಷ್ಟಿಯಿಂದ 1947ರ ಆಗಸ್ಟ್ 15ರಂದು ಸ್ವತಂತ್ರಗೊಂಡಿದೆ. ಜನವರಿ 26 ,1950ರಲ್ಲಿ ಭಾರತವು ಗಣತಂತ್ರ ದೇಶ ಎಂದು ಘೋಷಿಸಿಕೊಂಡು ಇಂದಿಗೆ 75 ವರ್ಷಗಳು ಕಳೆದಿದೆ ಎಂದರು.
ಅಂಬೇಡ್ಕರ್ ಆಶಯದಂತೆ ನಡೆದುಕೊಳ್ಳುವುದು ಅಗತ್ಯ- ಮಧು ಬಂಗಾರಪ್ಪ:ಅಂಬೇಡ್ಕರ ಅವರ ಆಶಯಗಳನ್ನು ಅರಿತು, ಅದರಂತೆ ನಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ಶಿಕ್ಷಣ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣ ನೇರವೇರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇತರರ ಹಕ್ಕುಗಳನ್ನು ಗೌರವಿಸುವ, ಶತಮಾನಗಳಿಂದ ನಾವು ಕಾಯ್ದುಕೊಂಡು ಬಂದಿರುವ ಬಹುಸಂಸ್ಕೃತಿಯನ್ನು ಉಳಿಸಲು ನಾವು ಪಣತೊಡಬೇಕಾಗಿದೆ. ವಿಶ್ವದ ಭೂಪಟದಲ್ಲಿ ಹಲವು ಭಾಷೆ, ಧರ್ಮ, ಪ್ರಾಂತ್ಯಗಳಿಂದ ಕೂಡಿರುವ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರ ನಮ್ಮ ಭಾರತ. ಐಕ್ಯತೆ, ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ಬಲಿಷ್ಠ ರಾಷ್ಟ್ರವಾಗಿ ನಮ್ಮ ದೇಶ ಬೆಳೆದು ನಿಂತಿದೆ ಎಂದರು.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಹೇಳಿದಂತೆ ನ್ಯಾಯವೆಂದರೆ, ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆ, ಅವರ ಈ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಧ್ಯೇಯ ನಮ್ಮದು. ಭಾರತವನ್ನು ಬಲಾಡ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ನಮ್ಮ ಅನೇಕ ನಾಯಕರನ್ನು, ಯೋಧರು ಹಾಗೂ ದೇಶಾಭಿಮಾನಿಗಳನ್ನು ನೆನೆಯುವುದು ಮತ್ತು ಅವರು ಆಶಿಸಿದಂತೆ ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ತಿಳಿಸಿದರು.