ಬೆಂಗಳೂರು :ಖಾಸಗಿ ಸುದ್ದಿವಾಹಿನಿ ಹೆಸರಿನಲ್ಲಿ ಇಂದಿರಾನಗರ ಸ್ಪಾ ಮಾಲೀಕರಿಗೆ 15 ಲಕ್ಷ ನೀಡುವಂತೆ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ನಿರೂಪಕಿ ದಿವ್ಯಾ ವಸಂತಾಳನ್ನು ಜೀವನ್ ಭೀಮಾನಗರ ಠಾಣೆ ಪೊಲೀಸರು ಬಂಧಿಸಿ ನಗರಕ್ಕೆ ಕರೆತರುತ್ತಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಜಾನುಕುಂಟೆ ವೆಂಕಟೇಶ್ ಹಾಗೂ ದಿವ್ಯಾ ವಸಂತಾ ಅವರ ಸಹೋದರ ಸಂದೇಶ್ ಎಂಬುವರನ್ನು ಬಂಧಿಸಲಾಗಿತ್ತು. ಆದರೆ, ಬಂಧನ ಭೀತಿ ಎದುರಾಗುತ್ತಿದ್ದಂತೆ ದಿವ್ಯಾ ನಾಪತ್ತೆಯಾಗಿದ್ದಳು. ಶೋಧ ನಡೆಸಿದ್ದ ಪೊಲೀಸರು, ಕೇರಳದಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದರು. ಖಚಿತ ಮಾಹಿತಿ ಮೇರೆಗೆ ಹೊರರಾಜ್ಯದಲ್ಲಿದ್ದ ಆರೋಪಿಯನ್ನು ಬಂಧಿಸಿ ಅವರ ಜೊತೆಗೆ ಮತ್ತೋರ್ವ ಆರೋಪಿಯನ್ನು ನಗರಕ್ಕೆ ಕರೆತರಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಖಚಿತಪಡಿಸಿದ್ದಾರೆ.
ಇಂದಿರಾನಗರ 100ನೇ ಅಡಿ ರಸ್ತೆಯಲ್ಲಿರುವ ಟ್ರೀ ಅಂಡ್ ಸ್ಪಾ ಬ್ಯೂಟಿ ಪಾರ್ಲರ್ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಅವರಿಗೆ ವೇಶ್ಯಾವಾಟಿಕೆ ನಡೆದಿದೆ ಎಂದು ಬೆದರಿಸಿ 15 ಲಕ್ಷ ಹಣ ನೀಡುವಂತೆ ಆರೋಪಿ ರಾಜಾನುಕುಂಟೆ ವೆಂಕಟೇಶ್ ಡಿಮ್ಯಾಂಡ್ ಮಾಡಿದ್ದ. ಈ ಸಂಬಂಧ ಶಿವಶಂಕರ್ ಜೆ.ಬಿ. ನಗರ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವೆಂಕಟೇಶ್ ಹಾಗೂ ಸಂದೇಶ್ ಎಂಬುವರನ್ನು ಬಂಧಿಸಿದ್ದರು.
ಕೃತ್ಯದಲ್ಲಿ ದಿವ್ಯಾಳ ಪಾತ್ರ ಹಿನ್ನೆಲೆ ಆಕೆಯನ್ನ ಹೆಚ್ಚಿನ ವಿಚಾರಣೆಗೊಳಪಡಿಸಿದ ಬಳಿಕ ಮುಂದಿನ ಕಾನೂನು ಕ್ರಮ ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ. ವೆಂಕಟೇಶ್ ವಿರುದ್ಧ ಜೆ.ಬಿ. ನಗರ, ಇಂದಿರಾನಗರ, ಕೋರಮಂಗಲ, ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿವೆ.
ಇದನ್ನೂ ಓದಿ :ತಾಯಿಯ ಫೋಟೋ ವೈರಲ್ ಮಾಡುವುದಾಗಿ ಬೆದರಿಸಿ ಮಗಳ ನಗ್ನ ಫೋಟೋ ಪಡೆದ ವಂಚಕ: ಬೆಂಗಳೂರಲ್ಲಿ ಯುವತಿ ದೂರು - Blackmail Case