ಬೆಂಗಳೂರು: ಮಾರ್ಚ್ 1ರಂದು ಸ್ಫೋಟ ಸಂಭವಿಸಿದ್ದ ಐಟಿಪಿಎಲ್ ಮುಖ್ಯರಸ್ತೆಯ 'ದಿ ರಾಮೇಶ್ವರಂ ಕೆಫೆ' ಇಂದು ಗ್ರಾಹಕರಿಗೆ ಮುಕ್ತವಾಗಿದೆ. ಒಂದು ವಾರದ ಬಳಿಕ ಇಂದು ಬೆಳಿಗ್ಗೆಯಿಂದಲೇ ರಾಮೇಶ್ವರಂ ಕೆಫೆ ತನ್ನ ದೈನಂದಿನ ವಹಿವಾಟು ಆರಂಭಿಸಿದೆ. ಮಾರ್ಚ್ 9ರಿಂದ ಕೆಫೆ ಪುನರಾರಂಭಿಸುವುದಾಗಿ ಹೇಳಿದ್ದ ಕೆಫೆ ಮಾಲೀಕರು, ಶುಕ್ರವಾರದಂದು ಕೆಫೆಯಲ್ಲಿ ಪೂಜೆ, ಹೋಮ-ಹವನ ಕಾರ್ಯಗಳನ್ನು ನಡೆಸಿದ್ದರು.
ಸ್ಫೋಟದಿಂದ ಕೆಫೆಯಲ್ಲಿ ಹಾನಿಗೊಳಗಾಗಿದ್ದ ಸ್ಥಳವನ್ನು ಸಂಪೂರ್ಣವಾಗಿ ಮರು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಗ್ರಾಹಕರು ಪ್ರವೇಶಿಸುವ ಕಡೆಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಇಂದು ಬೆಳಿಗ್ಗೆಯಿಂದಲೇ ಗ್ರಾಹಕರು ಕೆಫೆಗೆ ಬರಲಾರಂಭಿಸಿದ್ದಾರೆ. ಪ್ರತಿಯೊಬ್ಬರನ್ನು ಮೆಟಲ್ ಡಿಟೆಕ್ಟರ್ ಹಾಗೂ ಹ್ಯಾಂಡ್ ಡಿಟೆಕ್ಟರ್ ಮೂಲಕ ಪರಿಶೀಲಿಸಿ ಬಳಿಕ ಕೆಫೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಸ್ಫೋಟ ಸಂಭವಿಸಿದ ಹಿನ್ನೆಲೆ, ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿತ್ತು. ನಿನ್ನೆ ಪೊಲೀಸ್ ಭದ್ರತೆಯಲ್ಲಿಯೇ ಪೂಜಾ ಕೈಂಕರ್ಯಗಳು ನಡೆದಿವೆ. ಹಾನಿಗೊಳಗಾದ ಭಾಗಗಳನ್ನು ದುರಸ್ತಿಗೊಳಿಸಿ, ಕೆಫೆಯನ್ನು ಸಂಪೂರ್ಣವಾಗಿ ತಳಿರು-ತೋರಣಗಳಿಂದ ಶೃಂಗರಿಸಲಾಗಿದೆ. ಶನಿವಾರ ಬೆಳಿಗ್ಗೆ 6.30ರಿಂದ ಕೆಫೆ ಪುನರಾರಂಭವಾಗಲಿದೆ ಎಂದು ಕೆಫೆಯ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳು ತಿಳಿಸಿದ್ದವು. ಜೊತೆಗೆ ಶಿವರಾತ್ರಿ ದಿನದಂದ ಮತ್ತೆ ಕೆಫೆ ಆರಂಭಿಸುವುದಾಗಿ ರಾಮೇಶ್ವರಂ ಕೆಫೆಯ ಸಂಸ್ಥಾಪಕ ರಾಘವೇಂದ್ರ ರಾವ್ ಈ ಮೊದಲು ತಿಳಿಸಿದ್ದರು.
ರಾಮೇಶ್ವರಂ ಕೆಫೆ ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೆ ಹೈದರಾಬಾದ್, ಚೆನ್ನೈ ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. ಇದು ದಕ್ಷಿಣ ಭಾರತದ ಸಸ್ಯಾಹಾರ ಖಾದ್ಯಗಳಿಗೆ ಫೇಮಸ್ ಆಗಿದೆ.
ಮಾಲೀಕರು ಹೇಳಿದ್ದೇನು?:ಕೆಫೆ ಪುನರಾರಂಭದ ಕುರಿತು ಪ್ರತಿಕ್ರಿಯಿಸಿದ ಮಾಲೀಕ ರಾಘವೇಂದ್ರ ರಾವ್, ''ಒಂದು ಕೆಟ್ಟ ಘಟನೆ ಆಗಿ ಹೋಗಿದೆ. ಈಗ ಮತ್ತೆ ರಾಮೇಶ್ವರಂ ಕೆಫೆ ರೀ-ಓಪನ್ ಮಾಡಿದ್ದೇವೆ. ಜನರ ಬೆಂಬಲ ಚೆನ್ನಾಗಿದೆ. ಬರುವ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಭದ್ರತೆ ಹೆಚ್ಚಿಸಿದ್ದು, ಪ್ರತಿಯೊಬ್ಬರನ್ನೂ ಚೆಕ್ ಮಾಡಿ ಬಿಡಲಾಗುತ್ತಿದೆ'' ಎಂದರು.
''ಪ್ರಕರಣದ ತನಿಖೆಯನ್ನು ಎನ್ಐಎ ಮಾಡುತ್ತಿದೆ, ನಾವು ಯಾವುದಕ್ಕೂ ಹೆದರುವುದಿಲ್ಲ. ಬೇರೆ ಬೇರೆ ರಾಜ್ಯ ಹಾಗೂ ದೇಶಗಳಲ್ಲಿಯೂ ರಾಮೇಶ್ವರಂ ಕೆಫೆ ತೆರೆಯಲಿದ್ದೇವೆ' ಎಂದು ಇದೇ ಸಂದರ್ಭದಲ್ಲಿ ರಾಘವೇಂದ್ರ ರಾವ್ ತಿಳಿಸಿದರು.
ಇದನ್ನೂ ಓದಿ:ಸ್ಫೋಟದ ಬಳಿಕ ನಾಳೆಯಿಂದ 'ದಿ ರಾಮೇಶ್ವರಂ ಕೆಫೆ' ಗ್ರಾಹಕರಿಗೆ ಮುಕ್ತ
ಸ್ಫೋಟ ಪ್ರಕರಣ:ಇದೇ ಮಾರ್ಚ್ 1ರ ಶುಕ್ರವಾರದಂದು ಬೆಂಗಳೂರಿನ ಪ್ರಸಿದ್ಧ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಬೆಳಗ್ಗೆ 11:30ರ ಹೊತ್ತಿಗೆ ಇಲ್ಲಿಗೆ ಬಂದಿದ್ದ ಶಂಕಿತ ಆರೋಪಿ, ಇಡ್ಲಿ ತಿಂದು ಸ್ಫೋಟಕವಿದ್ದ ಬ್ಯಾಗ್ ಅನ್ನು ಹೋಟೆಲ್ನೊಳಗೆ ಇಟ್ಟು ತೆರಳಿದ್ದ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಬಾಂಬ್ ಬ್ಲ್ಯಾಸ್ಟ್ ಆಗಿತ್ತು. ಇದರಿಂದಾಗಿ 9 ಜನರು ಗಾಯಗೊಂಡಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಪ್ರಕರಣವನ್ನು ಎನ್ಐಎ ನಡೆಸುತ್ತಿದೆ. ಎನ್ಐಎ ತೀವ್ರ ವಿಚಾರಣೆ ಮುಂದುವರಿಸಿದ್ದು, ಶಂಕಿತ ಆರೋಪಿಯ ಸುಳಿವು ಕೊಟ್ಟವರಿಗೆ 10 ಲಕ್ಷ ರೂ ಬಹುಮಾನ ಕೊಡುವುದಾಗಿ ತಿಳಿಸಿದೆ. ಜನರಿಗೆ ಆರೋಪಿಯ ಗುರುತು ಗೊತ್ತಾಗಲಿ ಎಂದು ಶಂಕಿತನ ವಿಡಿಯೋಗಳನ್ನು ಎನ್ಐಎ ರಿಲೀಸ್ ಮಾಡಿದೆ. ತೀವ್ರ ತನಿಖೆ ಮುಂದುವರಿದಿದ್ದು, ಶಂಕಿತ ಆರೋಪಿಯ ಪತ್ತೆಗೆ ಎನ್ಐಎ, ಸಾರ್ವಜನಿಕರ ಸಹಾಯ ಕೋರಿದೆ.
ಇದನ್ನೂ ಓದಿ:ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಶಂಕಿತನ ಎರಡು ವಿಡಿಯೋ ಬಿಡುಗಡೆ ಮಾಡಿದ ಎನ್ಐಎ