ಕರ್ನಾಟಕ

karnataka

ETV Bharat / state

ದರ್ಶನ್ ಸೇರಿ ಎಲ್ಲ ಆರೋಪಿಗಳ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ - RENUKASWAMY MURDER CASE

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಆರೋಪಿಗಳಿಗೆ ನೀಡಿರುವ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ದರ್ಶನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ
ದರ್ಶನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ (ETV Bharat)

By ETV Bharat Karnataka Team

Published : Jan 6, 2025, 7:27 PM IST

Updated : Jan 6, 2025, 9:20 PM IST

ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ನಗರ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯ ವಕೀಲ ಅನಿಲ್ ನಿಶಾನಿ ಅವರು ಅರ್ಜಿ ಸಲ್ಲಿಸಿದ್ದು, ವಿಚಾರಣೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ತಿಳಿದು ಬಂದಿದೆ.

ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಡಿ.13ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದರು. ಗೃಹ ಇಲಾಖೆಯಿಂದ ಪೂರ್ವಾನುಮತಿ ದೊರೆತ ಬಳಿಕ ದಾಖಲೆ ಹಾಗೂ ಚಾರ್ಜ್​ ಶೀಟ್​​ನಲ್ಲಿರುವ ಅಂಶಗಳನ್ನು ಅನುವಾದ ಮಾಡುವ ಕಾರ್ಯ ವಿಳಂಬ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸುವ ಕಾರ್ಯ ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮೇಲ್ಮನವಿ ಅರ್ಜಿಯಲ್ಲಿ ಏನಿದೆ?: ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ 17 ಮಂದಿ ಆರೋಪಿಗಳ ಪೈಕಿ ಶರಣಾಗತಿಯಾದ ನಾಲ್ವರನ್ನ ಹೊರತುಪಡಿಸಿ ಉಳಿದ ಆರೋಪಿಗಳ ಬಂಧನಕ್ಕೆ ಒಂದೇ ಕಾರಣಗಳನ್ನ ನೀಡಲಾಗಿದೆ. ಇದನ್ನು ಆರೋಪಿಗಳ ಪರ ವಕೀಲರ ಆಕ್ಷೇಪಕ್ಕೆ ಉತ್ತರಿಸಲಾಗಿದ್ದು, 13 ಮಂದಿ ಆರೋಪಿಗಳನ್ನು ಒಂದೇ ದಿನ ಅಂತರದಲ್ಲಿ ಬಂಧಿಸಲಾಗಿದೆ. ಹೀಗಾಗಿ ಬೇರೆ - ಬೇರೆ ಕಾರಣಗಳನ್ನ ನೀಡಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಕರಣದಲ್ಲಿ ಸಾಕ್ಷಿದಾರರ ಹೇಳಿಕೆಗಳು ಭಿನ್ನವಾಗಿದೆ ಎಂಬುದರ ಬಗ್ಗೆ ಆರೋಪಿಗಳ ಪರ ವಕೀಲರ ಆಕ್ಷೇಪಕ್ಕೆ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ಪೊಲೀಸರು ಉತ್ತರಿಸಿದ್ದು, ಸಾಕ್ಷಿದಾರರು ಏನನ್ನು ನೋಡಿರುತ್ತಾರೆಯೋ ಅದನ್ನೇ ಹೇಳಿದ್ದಾರೆ. ಹೀಗಾಗಿ ಅವರ ಹೇಳಿಕೆಯನ್ನ ಯಥಾ ಪ್ರಕಾರ ದಾಖಲಿಸಿರುವ ಬಗ್ಗೆ ತಿಳಿದು ಬಂದಿದೆ. ಮೇಲ್ಮನವಿ ಅರ್ಜಿಗೆ ತಕರಾರು ಇದ್ದರೆ ಆಕ್ಷೇಪಣೆ ಸಲ್ಲಿಸುವಂತೆ ಸುಪ್ರೀಂ ಕಾಲಾವಕಾಶ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಜೂನ್ 8ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನ ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿದ ಆರೋಪದಡಿ ಜೂ.8ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಂತ-ಹಂತವಾಗಿ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು. ಎಲ್ಲಾ ಆರೋಪಿಗಳಿಗೂ ಜಾಮೀನು ದೊರೆತಿದೆ. ಕೆಳ ಹಂತದ ನ್ಯಾಯಾಲಯ ನೀಡಿರುವ ಜಾಮೀನು ಅರ್ಜಿಯನ್ನು ಸುಪ್ರಿಂ ರದ್ದುಗೊಳಿಸಿದರೆ ಆರೋಪಿಗಳನ್ನು ಮತ್ತೆ ಬಂಧಿಸಬಹುದಾಗಿದೆ.

ಇದನ್ನೂ ಓದಿ: ಜಾಮೀನು ದೊರೆತ ಮಾತ್ರಕ್ಕೆ ಪ್ರಾಸಿಕ್ಯೂಷನ್ ವೈಫಲ್ಯವೆಂದು ಹೇಳಲಾಗದು: ಪೊಲೀಸ್ ಕಮಿಷನರ್ ದಯಾನಂದ್

Last Updated : Jan 6, 2025, 9:20 PM IST

ABOUT THE AUTHOR

...view details