ಚಿತ್ರದುರ್ಗ:"ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ. ನಟ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ಮಂಜೂರಾಗಿರುವ ಬಗ್ಗೆ ಮಾಧ್ಯಮಗಳಿಂದ ತಿಳಿಯಿತು. ತಾತ್ಕಾಲಿಕವಾಗಿ ಆರೋಪಿಗಳಿಗೆ ಜಾಮೀನು ಸಿಕ್ಕಿರಬಹುದು. ಅಂತಿಮವಾಗಿ ಶಿಕ್ಷೆ ಆಗುವ ನಂಬಿಕೆ ಇದೆ" ಎಂದು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರ ನನ್ನ ಸೊಸೆ ಸಹನಾಗೆ ಸರ್ಕಾರಿ ನೌಕರಿ ನೀಡಬೇಕು. ದರ್ಶನ್ ನಮ್ಮ ಜೊತೆ ಮಾತುಕತೆ ನಡೆಸುವ ವಿಚಾರ ಇಲ್ಲ. ಅವರು ನಮ್ಮ ಜೊತೆ ಮಾತನಾಡುವಂಥದ್ದು ಏನೂ ಇಲ್ಲ. ನಾವು ಮಗನ ಕಳೆದುಕೊಂಡು ದುಖಃದಲ್ಲಿದ್ದೇವೆ. ನಮಗೆ ಮಗ ಬೇಕೇ ಹೊರತು ಮಾತುಕತೆ ಏನೂ ಬೇಕಿಲ್ಲ. ಈವರೆಗೆ ನಮಗೆ ಮಾತುಕತೆಗೆಂದು ಯಾರೂ ಸಂಪರ್ಕ ಮಾಡಿಲ್ಲ. ಮಾತುಕತೆಗೆಂದು ನಮ್ಮ ಸಂಪರ್ಕ ಮಾಡಲು ಅವಕಾಶವಿಲ್ಲ" ಎಂದು ಸ್ಪಷ್ಟಪಡಿಸಿದರು.