ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಪರಸ್ಪರ ಭ್ರಷ್ಟಾಚಾರ ಆರೋಪ ಪ್ರತ್ಯಾರೋಪದ ತಿಕ್ಕಾಟ ಜೋರಾಗಿದೆ. ದಾಖಲೆಗಳನ್ನು ಮುಂದಿಟ್ಟುಕೊಂಡು ಪರಸ್ಪರ ಅಕ್ರಮಗಳ ಆರೋಪಗಳನ್ನು ಮಾಡಲಾಗುತ್ತಿದೆ. ಆ ಮೂಲಕ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದವರು ಒಬ್ಬರ ಮೇಲೊಬ್ಬರಂತೆ ಅಕ್ರಮಗಳ ಪ್ರತ್ಯಾಸ್ತ್ರಗಳನ್ನು ಛೂ ಬಿಡುತ್ತಿದ್ದಾರೆ. ಅದರ ಭಾಗವಾಗಿ ಸಿಎಂ ಸಿದ್ದರಾಮಯ್ಯ ಮೇಲೆ ಪ್ರತಿಪಕ್ಷಗಳು ಅರ್ಕಾವತಿ ರೀಡೂ ಅಕ್ರಮ ಆರೋಪದ ಅಸ್ತ್ರವನ್ನು ಬಳಸಲು ಮುಂದಾಗಿವೆ. ಅಷ್ಟಕ್ಕೂ ಏನಿದು ರೀಡೂ ಅಕ್ರಮದ ಆರೋಪ ವರದಿ ಅನ್ನೋದರ ಮಾಹಿತಿ ಇಲ್ಲಿದೆ.
ಮುಡಾ ನಿವೇಶನ ಹಂಚಿಕೆ ಅಕ್ರಮ ಆರೋಪ ಸಂಬಂಧ ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರು ಪೂರ್ವಾನುಮತಿ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಸಮರ ಜೋರಾಗಿದೆ. ಪ್ರತಿಪಕ್ಷಗಳ ಮುಡಾ ಅಕ್ರಮದ ಆರೋಪಕ್ಕೆ ಪ್ರತಿಯಾಗಿ ಆಡಳಿತ ಪಕ್ಷ ಪ್ರತಿಪಕ್ಷಗಳ ಅಧಿಕಾರಾವಧಿಯ ಹಗರಣಗಳನ್ನು ಮುಂದಿಟ್ಟುಕೊಂಡು ಕೌಂಟರ್ ಕೊಡುತ್ತಿದೆ. ಕಳೆದ ಒಂದು ತಿಂಗಳಿಂದ ವಿಪಕ್ಷ ಹಾಗೂ ಆಡಳಿತ ಪಕ್ಷ ಪರಸ್ಪರ ಅಕ್ರಮ ಆರೋಪಗಳ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿ ಸಂಘರ್ಷಕ್ಕೆ ಇಳಿದಿವೆ. ಇದರ ಭಾಗವಾಗಿ ಇತ್ತೀಚೆಗೆ ಆಡಳಿತ ಪಕ್ಷ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಗಂಗೇನಹಳ್ಳಿ ಡಿನೋಟಿಫಿಕೇಷನ್ ಅಕ್ರಮದ ಆರೋಪ ಮಾಡಿ, ಸಚಿವ ಕೃಷ್ಣಬೈರೇಗೌಡ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.
ಒಬ್ಬರ ಮೇಲೊಬ್ಬರಂತೆ ಸರಣಿ ಅಕ್ರಮಗಳ ಆರೋಪಗಳನ್ನು ಮಾಡುವ ಮೂಲಕ ರಾಜಕೀಯ ನಾಯಕರು ಸಂಘರ್ಷಕ್ಕೆ ಇಳಿದಿದ್ದಾರೆ. ಆ ಮೂಲಕ ಅಸ್ತ್ರ-ಪ್ರತ್ಯಾಸ್ತ್ರಗಳ ಮೊರೆ ಹೋಗಿದ್ದಾರೆ. ಈ ಮಧ್ಯೆ ರಾಜ್ಯಪಾಲರು ಅರ್ಕಾವತಿ ರೀಡೂ ಅಕ್ರಮ ಆರೋಪ ಸಂಬಂಧ ಸರ್ಕಾರದಿಂದ ಮಾಹಿತಿ ಕೇಳಿರುವುದು ಕುತೂಹಲ ಕೆರಳಿಸಿದೆ. ಅರ್ಕಾವತಿ ಬಡಾವಣೆ ರೀಡೂ ಹೆಸರಲ್ಲಿ ನಡೆದ ಡಿನೋಟಿಫಿಕೇಷನ್ ಅಕ್ರಮ ಆರೋಪ ಸಂಬಂಧ 2013-17ರ ಅವಧಿಯಲ್ಲಿ ಸಿದ್ದರಾಮಯ್ಯ ನಿವೃತ್ತ ನ್ಯಾ. ಹೆಚ್.ಎಸ್. ಕೆಂಪಣ್ಣ ವಿಚಾರಣಾ ಆಯೋಗವನ್ನು ರಚಿಸಿದ್ದರು. 2017ಕ್ಕೆ ಕೆಂಪಣ್ಣ ಆಯೋಗ ವರದಿ ಸಲ್ಲಿಸಿತ್ತು. ಆದರೆ, ಇದುವರೆಗೂ ವರದಿಯನ್ನು ಸದನದಲ್ಲಿ ಮಂಡನೆ ಮಾಡಿಲ್ಲ.
ಮಾಹಿತಿ ಕೇಳಿದ ರಾಜ್ಯಪಾಲರು:ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಅರ್ಕಾವತಿ ರೀಡೂ ಮೇಲಿನ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ವರದಿ ಮಂಡಿಸುವ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿದ್ದರು. ಇತ್ತ ರಾಜ್ಯಪಾಲರು ಬಿಜೆಪಿ ದೂರಿನ ಮೇರೆಗೆ ನ್ಯಾ. ಕೆಂಪಣ್ಣ ಆಯೋಗದ ವರದಿ ಹಾಗೂ ಸಂಬಂಧಪಟ್ಟ ಕಡತವನ್ನು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ರಾಜ್ಯಪಾಲರ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆ ಉಪ ಮುಖ್ಯಮಂತ್ರಿಗೆ ಸೆ.11ರಂದು ಆಯೋಗದ ವರದಿ ಹಾಗೂ ದಾಖಲೆಗಳನ್ನು ಸಲ್ಲಿಸಿದ್ದಾರೆ. ಕೆಂಪಣ್ಣ ಆಯೋಗ ವರದಿಯ ಸಂಪುಟಗಳನ್ನೊಳಗೊಂಡ ಮೂಲ ವರದಿಯನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ. ಶಿವಕುಮಾರ್ ಕಚೇರಿಗೆ ಕಳುಹಿಸಲಾಗಿದೆ.
ಏನಿದು ಅರ್ಕಾವತಿ 'ರೀಡೂ' ಅಕ್ರಮ ಆರೋಪ?:ಬೆಂಗಳೂರಿನ ಅರ್ಕಾವತಿ ಬಳಿ ಅರ್ಕಾವತಿ ಬಡಾವಣೆ ರಚನೆಗಾಗಿ ಬಿಡಿಎ 2004ರಲ್ಲಿ ಅಧಿಸೂಚನೆ ಹೊರಡಿಸಿತ್ತು. 2,750 ಎಕರೆ ಜಮೀನು ಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಬಿಡಿಎ 1,919.13 ಎಕರೆ ಜಮೀನನ್ನು ಸ್ವಾಧೀನ ಪಡಿಸಿತ್ತು. ಇದರಲ್ಲಿ 1,459.37 ಎಕರೆ ರೈತರ ಭೂಮಿ ಹಾಗೂ 459.16 ಎಕರೆ ಸರ್ಕಾರಿ ಭೂಮಿ ಒಳಗೊಂಡಿತ್ತು. ಭೂಸ್ವಾಧೀನ ಅಕ್ರಮ ಡಿನೋಟಿಫಿಕೇಷನ್ ಆರೋಪ, ನಿಯಮ ಉಲ್ಲಂಘನೆ ಹಿನ್ನೆಲೆ ಹೈಕೋರ್ಟ್ ಸಂಪೂರ್ಣ ಭೂಸ್ವಾಧೀನವನ್ನು ವಜಾಗೊಳಿಸಿತ್ತು. ಬಳಿಕ ಹೈಕೋರ್ಟ್ ದ್ವಿಸದಸ್ಯ ಪೀಠ ಅರ್ಕಾವತಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೆಲ ಷರತ್ತುಗಳೊಂದಿಗೆ ಎತ್ತಿಹಿಡಿದಿತ್ತು. 2010ರಲ್ಲಿ ಸುಪ್ರೀಂ ಕೋರ್ಟ್ ಭೂಸ್ವಾಧೀನ ಸಂಬಂಧ ಆರು ಮಾನದಂಡ ವಿಧಿಸಿ, ಅದರನ್ವಯ ಭೂಮಿ ಡಿನೋಟಿಫಿಕೇಷನ್ಗೆ ನಿರ್ದೇಶನ ನೀಡಿತ್ತು. ಇದರ ಆಧಾರದ ಮೇಲೆ ಬಿಡಿಎ 2013ರಲ್ಲಿ 285 ಎಕರೆ ಜಮೀನನ್ನು ಭೂಸ್ವಾಧೀನದಿಂದ ಕೈ ಬಿಟ್ಟಿತ್ತು. 2014ರಲ್ಲಿ ಬಿಡಿಎ ಮರುವಿನ್ಯಾಸಗೊಳಿಸಿ ಅಧಿಸೂಚನೆ ಹೊರಡಿಸಿತ್ತು.