ಬೆಂಗಳೂರು:ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ ತನ್ನ ಆರ್ಭಟವನ್ನು ಮುಂದುವರೆಸಿದ್ದು ಕರಾವಳಿ ಜಿಲ್ಲೆಗಳಲ್ಲಂತೂ ಭಾರೀ ವರ್ಷಧಾರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಮೂರು ಜಿಲ್ಲೆಗಳಿಗೆ ಮುಂದಿನ 24 ಗಂಟೆಗೆ ಅನ್ವಯವಾಗುವಂತೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಕೊಡಲಾಗಿದೆ. ಇನ್ನು ಮಲೆನಾಡು ಭಾಗದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಉಳಿದಂತೆ ಬೆಳಗಾವಿ, ಧಾರವಾಡ, ಹಾವೇರಿ, ಹಾಸನ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ ಚದುರಿದ ಮಳೆಯಿಂದ ಭಾರೀ ಮಳೆಯಾಗಲಿದೆ. ಅಲ್ಲಿನ ಪ್ರದೇಶಗಳಲ್ಲಿ ಗಾಳಿಯ ವೇಗವು 40 ರಿಂದ 50 ಕಿ.ಮೀ ಪ್ರತಿ ಘಂಟೆಗೆ ಬೀಸಲಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮತ್ತು ಅತಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಧಾರವಾಡ, ಹಾವೇರಿ, ಬೆಳಗಾವಿ, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ 45 ರಿಂದ 55 ಕಿ.ಮೀ ಪ್ರತಿ ಘಂಟೆಗೆ ಗಾಳಿ ಬೀಸಲಿದ್ದು ಅಲ್ಲೂ ಹೆಚ್ಚು ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹೇಳಿದೆ.
ಮೀನುಗಾರರಿಗೆ ಎಚ್ಚರಿಕೆ:ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನವಿರಲಿದ್ದು, 55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ರಾಜ್ಯಕ್ಕೆ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಆದ್ದರಿಂದ ಮೀನುಗಾರರು ಎಚ್ಚರಿಕೆಯಿಂದ ಇರಲು ಸೂಚಿಸಿದೆ.