ಬೆಂಗಳೂರು :ಜನ್ಮದಿನ ಸಮಾರಂಭದಲ್ಲಿ ಏರ್ ಫೈರ್ ಮಾಡಿದ್ದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸೈಯ್ಯದ್ ಅಲ್ತಾಫ್ ಅಹಮದ್ (59) ಬಂಧಿತ ಆರೋಪಿ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದ ವಿಡಿಯೋ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 22ರಂದು ಬನ್ನೇರುಘಟ್ಟ ರಸ್ತೆಯ ಗುಜುರಿ ಗೋದಾಮಿನಲ್ಲಿ ಮೊಯೀನ್ ಖಾನ್ ಎಂಬಾತನ ಜನ್ಮದಿನ ಸಂಭ್ರಮಾಚರಣೆ ನಡೆದಿತ್ತು. ಆ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಆರೋಪಿ ಅಲ್ತಾಫ್ ಅಹಮದ್, ತನ್ನ ಬಳಿಯಿದ್ದ ಪರವಾನಗಿ ಹೊಂದಿರುವ ಪಿಸ್ತೂಲ್ ತೆಗೆದು 6 ಸುತ್ತು ಏರ್ ಫೈರ್ ಮಾಡಿದ್ದಾನೆ. ಏರ್ ಫೈರ್ ಮಾಡುವ ವಿಡಿಯೋವನ್ನು ಜುಬೇರ್ ಖಾನ್ ಲಿಮ್ರಾ ಎಂಬ ಸಾಮಾಜಿಕ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.