ಮೈಸೂರು :ರಾಜಕೀಯ ಲಾಭಕ್ಕಾಗಿ ಬಿಜೆಪಿ- ಜೆಡಿಎಸ್ನವರು ಮಾಡುತ್ತಿರುವ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ. ಈ ಆರೋಪಗಳ ವಿರುದ್ಧ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡಲು ಸಿದ್ಧವಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ಜೆಡಿಎಸ್ ಹಾಗೂ ಬಿಜೆಪಿಯ ಪಾದಯಾತ್ರೆಗೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಬೃಹತ್ ಜನಾಂದೋಲನ ಮಾಡಿದೆ. ಬಿಜೆಪಿ ಹಾಗೂ ಜೆಡಿಎಸ್ನವರು ಆರೋಪಗಳನ್ನು ಆಧರಿಸಿ ಪಾದಯಾತ್ರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯನಿಗೆ ಕಪ್ಪು ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಅವರ ಆರೋಪಗಳು ಸುಳ್ಳು ಎಂದು ಜನರಿಗೆ ಮನವರಿಕೆ ಮಾಡಲು ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜಕೀಯವಾಗಿ ಮಣಿಸಲು ಬಿಜೆಪಿ-ಜೆಡಿಎಸ್ ಕುತಂತ್ರ: ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ಹೂಡಿದ್ದಾರೆ. ಆರೋಪಗಳಿಂದ ನನ್ನ ಮೇಲೆ ಕಪ್ಪು ಮಸಿ ಬಳಿದರೆ, ರಾಜಕೀಯವಾಗಿ ನನ್ನನ್ನು ಮಣಿಸಿ ಲಾಭ ಪಡೆಯಬಹುದು ಎಂಬ ಭ್ರಮೆಯಲ್ಲಿದ್ದಾರೆ. ಬಿಜೆಪಿ ಜೆಡಿಎಸ್ನವರ ಹಗರಣಗಳು ಬೇಕಾದಷ್ಟಿದ್ದು ಅವುಗಳನ್ನು ಬಯಲಿಗೆಳೆಯುತ್ತೇವೆ. ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ, ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವರ ಮೇಲೆ ಇರುವ ಹಗರಣಗಳ ವಿರುದ್ಧ ತನಿಖೆ ಕೈಗೊಳ್ಳಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.