ಬೆಂಗಳೂರು:ವುಮೆನ್ಸ್ ಪ್ರೀಮಿಯರ್ಲೀಗ್ನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಸೋಲು ಅನುಭವಿಸಿದೆ. ಶುಕ್ರವಾರ ತವರಿನಲ್ಲಿ ನಡೆದ ತನ್ನ ಮೂರನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ತಂಡ 4 ವಿಕೆಟ್‌ಗಳ ಅಂತರದಿಂದ ಸೋಲಿಗೆ ಶರಣಾಯಿತು.
ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಅರ್ಧ ಶತಕ ಮತ್ತು ನ್ಯಾಟ್ ಸ್ಕಿವರ್-ಬ್ರಂಟ್ ಅವರ ಉಪಯುಕ್ತ 42 ರನ್ಗಳು ಮುಂಬೈ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದವು. ಅಂತಿಮ ಹಂತದಲ್ಲಿ ಉರುಳಿದ ಮುಂಬೈನ 2 ವಿಕೆಟ್ಗಳು ಪಂದ್ಯವನ್ನು ಮತ್ತಷ್ಟು ರೋಚಕ ಹಂತಕ್ಕೆ ಕೊಂಡೊಯ್ದವು. ಈ ಬಾರಿಯ ಟೂರ್ನಿಯಲ್ಲಿ ಅತಿ ಕಿರಿಯ ಆಟಗಾರ್ತಿ ಎನಿಸಿರುವ ಮುಂಬೈ ಇಂಡಿಯನ್ಸ್ ಆಟಗಾರ್ತಿ ಜಿ. ಕಮಲಿನಿ ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ಪವರ್ ಪ್ಲೇನಲ್ಲಿ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಡೇನಿಯಲ್ ವ್ಯಾಟ್-ಹಾಡ್ಜ್ ಮೊದಲ ವಿಕೆಟ್ಗೆ 29 ರನ್ಗಳ ಜೊತೆಯಾಟವನ್ನಾಡಿದರು. ಉತ್ತಮ ಆರಂಭ ಪಡೆದ ನಾಯಕಿ ಸ್ಮೃತಿ ಮಂಧಾನ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 26 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
ಇದರ ಬೆನ್ನಲ್ಲೇ ಡೇನಿಯಲ್ ವ್ಯಾಟ್ ಸಹ 9 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. 57 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿಗೆ ಎಲ್ಲಿಸ್ ಪೆರ್ರಿ ಹಾಗೂ ರಿಚಾ ಘೋಷ್ ಅರ್ಧಶತಕದ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಭದ್ರವಾಗಿ ಕ್ರೀಸ್‌ನಲ್ಲಿ ನಿಂತ ಎಲ್ಲಿಸ್ ಪೆರ್ರಿ ಹೊಡಿಬಡಿ ಆಟದ ಮೂಲಕ ಕೇವಲ 30 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಅಂತಿಮವಾಗಿ 81 ರನ್ಗಳಿಸಿದ್ದಾಗ 20ನೇ ಓವರ್‌ನ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಪೆರ್ರಿ ವಿಕೆಟ್ ಒಪ್ಪಿಸಿದರು.