ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಪಡಿತರ ಚೀಟಿ ಗದ್ದಲ: ಬಿಪಿಎಲ್​ ಕಾರ್ಡ್​ಗೆ ಯಾರು ಅನರ್ಹರು, ಈವರೆಗೆ ರದ್ದಾಗಿದ್ದೆಷ್ಟು? ಸಮಗ್ರ ವರದಿ - BPL CARD ROW

ಬಿಪಿಎಲ್ ಕಾರ್ಡ್ ರದ್ದು ವಿವಾದಕ್ಕೆ ಗುರಿಯಾಗಿದೆ. ಬಿಪಿಎಲ್ ಕಾರ್ಡ್ ಪಡೆಯಲು ಇರುವ ಅರ್ಹತೆ ಮತ್ತು ಮಾನದಂಡಗಳೇನು ಎಂಬುದರ ಕುರಿತು ಈಟಿವಿ ಭಾರತ ಕನ್ನಡ ಪ್ರತಿನಿಧಿ ವೆಂಕಟ ಪೊಳಲಿ ಮಾಡಿರುವ ಸಮಗ್ರ ವರದಿ ಇಲ್ಲಿದೆ..

ವಿಧಾನಸೌಧ
ವಿಧಾನಸೌಧ (ETV Bharat)

By ETV Bharat Karnataka Team

Published : Nov 19, 2024, 9:15 AM IST

ಬೆಂಗಳೂರು:ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್​ಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸುವುದು ಮತ್ತು ಎಪಿಎಲ್​ಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಆಹಾರ ಇಲಾಖೆ ಚುರುಕುಗೊಳಿಸಿದೆ. ಪ್ರತಿಪಕ್ಷಗಳು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಸರ್ಕಾರದ ವಿರುದ್ಧ ಕಿಡಿಕಾರಿವೆ. ಆದರೆ ಸರ್ಕಾರ ಮಾತ್ರ, ಅರ್ಹರ ಬಿಎಪಿಲ್ ಕಾರ್ಡ್ ರದ್ದು ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೂ ಸಹ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು, ವಿವಾದಕ್ಕೆ ಗುರಿಯಾಗಿದೆ. ರಾಜ್ಯದಲ್ಲಿ ಆಹಾರ ಇಲಾಖೆ ಪತ್ತೆ ಮಾಡಿದ ಅನರ್ಹ ಬಿಪಿಎಲ್ ಕಾರ್ಡ್, ರದ್ದಾದ ಕಾರ್ಡ್​ಗಳ ಸಮಗ್ರ ವರದಿ ಇಲ್ಲಿದೆ.

ರಾಜ್ಯದಲ್ಲಿನ ಪಡಿತರ ಕಾರ್ಡ್​ಗಳೆಷ್ಟು?ಆಹಾರ ಇಲಾಖೆ ನೀಡಿದ ಅಂಕಿ ಅಂಶದಂತೆ ರಾಜ್ಯದಲ್ಲಿ ಅಂತ್ಯೋದಯ, ಆದ್ಯತಾ ಬಿಪಿಎಲ್ ಕಾರ್ಡುಗಳು ಸೇರಿ ಒಟ್ಟು 1,25,74,521 ಇವೆ. ಸುಮಾರು 4,35,33,099 ಪಡಿತರ ಕುಟುಂಬ ಸದಸ್ಯರು ಇದ್ದಾರೆ. ಇದರಲ್ಲಿ ಕಡು ಬಡವರಿಗೆ ನೀಡುವ ಅಂತ್ಯೋದಯ ಅನ್ನ ಯೋಜನೆಯಡಿಯ ಪಡಿತರ ಕಾರ್ಡ್ 10,68,662 ಗಳಿವೆ. ಇನ್ನು ಸುಮಾರು 25,47,946 ಎಪಿಎಲ್ ಕಾರ್ಡ್​ಗಳಿವೆ.

ನಗರ ಪ್ರದೇಶದಲ್ಲಿ ಶೇ.50 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.75 ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಕಾರ್ಡ್​ಗಳನ್ನು ವಿತರಣೆ ಮಾಡುವ ಅವಕಾಶ ಇದೆ. ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಟ್ಟು ಶೇ.65.96ರಷ್ಟು ಪಡಿತರ ಚೀಟಿ ವಿತರಣೆ ಮಾಡಲಾಗಿದೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಿಪಿಎಲ್ ಪಡಿತರ ಚೀಟಿ ಇರುವುದು ಕರ್ನಾಟಕದಲ್ಲೇ. ಕೇರಳದಲ್ಲಿ ಶೇ.45.59, ತಮಿಳುನಾಡಿನಲ್ಲಿ ಶೇ.48.81, ತೆಲಂಗಾಣದಲ್ಲಿ ಶೇ.53.93, ಆಂಧ್ರಪ್ರದೇಶದಲ್ಲಿ ಶೇ.63.73 ಹಾಗೂ ಮಹಾರಾಷ್ಟ್ರದಲ್ಲಿ ಶೇ.58.47ರಷ್ಟು ಬಿಪಿಎಲ್ ಪಡಿತರ ಚೀಟಿ ಇದೆ ಎಂದು ಆಹಾರ ಇಲಾಖೆಯ ಅಂಕಿ ಅಂಶ ತಿಳಿಸುತ್ತದೆ.

ಬಿಪಿಎಲ್ ಕಾರ್ಡಿಗೆ ಯಾರು ಅನರ್ಹರು?2017ಕ್ಕೆ ಹೊರಡಿಸಿದ ಪರಿಷ್ಕೃತ ಮಾನದಂಡದ ಪ್ರಕಾರ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸಂಸ್ಥೆಗಳು/ಮಂಡಳಿಗಳು ನಿಗಮಗಳು, ಆದಾಯ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹವಲ್ಲ. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ್​ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹವಲ್ಲ.

ಇನ್ನು ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು ಪಡಿತರ ಚೀಟಿಗೆ ಅರ್ಹವಲ್ಲ. ಪ್ರತಿ ತಿಂಗಳು 150 ಯುನಿಟ್‌ಗಳಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡುವ ಕುಟುಂಬಗಳು, ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಆದ್ಯತಾ ಪಡಿತರ ಚೀಟಿಯನ್ನು ಪಡೆಯಲು ಅರ್ಹವಲ್ಲ ಎಂದು 2017ರ ಪರಿಷ್ಕೃತ ಮಾನದಂಡದಲ್ಲಿ ತಿಳಿಸಲಾಗಿದೆ.

13,87,639 ಅನರ್ಹ ಪಡಿತರ ಕಾರ್ಡ್​ಗಳು ಪತ್ತೆ:ರಾಜ್ಯದಲ್ಲಿ ಸುಮಾರು 13,87,639 ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಯಾಗಿವೆ. ಈ ಪೈಕಿ 6 ತಿಂಗಳಿಂದ ಪಡಿತರ ಪಡೆಯದೇ ಇರುವುದರಿಂದ 2,75,667 ಬಿಪಿಎಲ್ ಕಾರ್ಡ್, ಕುಟುಂಬ ತಂತ್ರಾಂಶದ ಪ್ರಕಾರ ಆದಾಯ ತೆರಿಗೆ ಪಾವತಿ ಮಾಡಿದ ಹಿನ್ನೆಲೆ 98,458 ಬಿಪಿಎಲ್ ಕಾರ್ಡುಗಳನ್ನು ಅನರ್ಹಗೊಳಿಸಲಾಗಿದೆ.

ಜೊತೆಗೆ ಸುಮಾರು 4,036 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದಿರುವುದು ಪತ್ತೆಯಾಗಿದೆ. ಇನ್ನು ಆದಾಯ ಮಿತಿ ಹೆಚ್ಚಿಗೆ ಇರುವ ಹಿನ್ನೆಲೆ 10,09,478 ಬಿಪಿಎಲ್ ಕಾರ್ಡ್ ಅನರ್ಹಗೊಳಿಸಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಿಂದ ಸುಮಾರು 1,59,319 ಮರಣ ಹೊಂದಿದ ಸದಸ್ಯರನ್ನು ಅನರ್ಹ ಮಾಡಲಾಗಿದೆ ಎಂದು ಕಳೆದ ತಿಂಗಳು ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಆಹಾರ ಇಲಾಖೆ ಮಾಹಿತಿ ನೀಡಿದೆ.

ರದ್ದಾಗಿರುವ ಪಡಿತರ ಚೀಟಿಗಳು ಎಷ್ಟು?ಅನರ್ಹಗೊಂಡ ಪಡಿತರ ಚೀಟಿ ಪೈಕಿ ಅಕ್ಟೋಬರ್​​ವರೆಗೆ ಸುಮಾರು 3,63,664 ಬಿಪಿಎಲ್ ಕಾರ್ಡುಗಳನ್ನು ರದ್ದು ಪಡಿಸಲಾಗಿದೆ. ಇನ್ನೂ ಸುಮಾರು 3.97 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ.‌ ಆರು ತಿಂಗಳಿಂದ ಪಡಿತರ ಪಡೆಯದೇ ಇರುವ ಸುಮಾರು 2,75,647 ಬಿಪಿಎಲ್ ಕಾರ್ಡುಗಳನ್ನು ರದ್ದು ಅಥವಾ ಅಮಾನತು ಮಾಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಆದಾಯ ತೆರಿಗೆ ಪಾವತಿ ಮಾಡುವವರ ಸುಮಾರು 50,462 ಪಡಿತರ ಚೀಟಿ, ಸರ್ಕಾರಿ ನೌಕರರ ಸುಮಾರು 2,964 ಬಿಪಿಎಲ್ ಕಾರ್ಡ್ ಮತ್ತು ಆದಾಯ ಮಿತಿ ಅಧಿಕ ಇರುವವರ 34,591 ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ. ಹಾಗೆಯೇ ಕೆವೈಸಿ ಮಾಡದೇ ಇರುವ ಹಿನ್ನೆಲೆ 13,44,072 ಅನರ್ಹ ಬಿಪಿಎಲ್ ಕುಟುಂಬ ಸದಸ್ಯರನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ 2,06,202 ಸದಸ್ಯರ ಹೆಸರನ್ನು ಕಾರ್ಡ್​ನಿಂದ ರದ್ದು ಪಡಿಸಲಾಗಿದೆ.

ಅರ್ಹರ ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದು ಮಾಡಲ್ಲ. ತೆರಿಗೆ ಪಾವತಿದಾರರು, ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್​ಗಳನ್ನು ಎಪಿಎಲ್​​ಗೆ ಬದಲಾವಣೆ ಮಾಡಲಾಗಿದೆ. ಎಪಿಎಲ್, ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ. ಬಿಪಿಎಲ್ ಕಾರ್ಡ್ ಸಮಗ್ರವಾಗಿ ಪರಿಷ್ಕರಣೆ ಮಾಡುವಂತೆ ಮತ್ತು ಅರ್ಹರಲ್ಲದವರನ್ನು ಎಪಿಎಲ್​​ಗೆ ಸೇರಿಸಲು ಸಿಎಂ ಸೂಚಿಸಿದ್ದಾರೆ. ಪರಿಷ್ಕರಣೆ ವೇಳೆ ಕೈತಪ್ಪಿ ಹೋದ್ರೆ ಬಿಪಿಎಲ್ ಕಾರ್ಡ್ ಪಡೆಯಲು ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ ಎಂದು ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ಅರ್ಹರಿಗೆ ಬಿಪಿಎಲ್​ ಕಾರ್ಡ್​ ಕೊಟ್ಟೇ ಕೊಡುತ್ತೇವೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details