ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಹೇಳಿಕೆ (ETV Bharat) ಉಡುಪಿ: "ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ದ್ರವ್ಯ ಸೇವನೆ ಕುರಿತು ಸಂತ್ರಸ್ತೆ ಹಾಗೂ ಆರೋಪಿಗಳ ರಕ್ತದ ಮಾದರಿಯ ಪರೀಕ್ಷೆ ನಡೆಸಲಾಗಿದೆ. ಸಂತ್ರಸ್ತೆಯ ವರದಿಯಲ್ಲಿ ಪಾಸಿಟಿವ್ ಮತ್ತು ಆರೋಪಿಗಳಾದ ಅಲ್ತಾಫ್ ಹಾಗೂ ಸವೇರಾ ರಿಚರ್ಡ್ ವರದಿಯಲ್ಲಿ ನೆಗೆಟಿವ್ ಬಂದಿದೆ" ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
"ಯುವತಿಯ ರಕ್ತದ ಮಾದರಿಯಲ್ಲಿ ಮಾದಕ ದ್ರವ್ಯ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಆರೋಪಿ ಅಲ್ತಾಫ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಈ ವೇಳೆ, ಆತ ತನ್ನ ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ, ಇದನ್ನೇ ಆ ಹುಡುಗಿ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಈ ಪುಡಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದು ಯಾವ ಮಾದರಿಯ ಮಾದಕ ದ್ರವ್ಯ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ" ಎಂದರು.
"ಯುವತಿಯ ರಕ್ತದಲ್ಲಿ ಕಂಡು ಬಂದಿರುವ ಮಾದಕ ದ್ರವ್ಯ ಹಾಗೂ ಆರೋಪಿ ತೋರಿಸಿರುವ ಮಾದಕ ದ್ರವ್ಯ ಒಂದೇ ಆಗಿದೆಯೇ ಎಂಬುದನ್ನು ತುಲನೆ ಮಾಡಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಾದಕ ದ್ರವ್ಯಕ್ಕೆ ಸಂಬಂಧಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಈ ಮಾದಕ ದ್ರವ್ಯವನ್ನು ಎಲ್ಲಿಂದ ತರಲಾಗಿದೆ ಮತ್ತು ಎಲ್ಲಿಂದ ಬಂದಿದೆ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಅದನ್ನು ಪತ್ತೆ ಹಚ್ಚಲಾಗುವುದು".
"ನೊಂದ ಯುವತಿಯು ನ್ಯಾಯಾಧೀಶರ ಮುಂದೆ ಹೇಳಿಕೆ ಕೊಡಲು ಬಾಕಿ ಇದ್ದು, ಆಕೆ ಚೇತರಿಕೆಯಾದ ಬಳಿಕ ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗುವುದು. ಆ ಮೂಲಕ ಆದಷ್ಟು ಬೇಗ ಈ ಅತ್ಯಾಚಾರ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಲಾಗುವುದು" ಎಂದು ಎಸ್ಪಿ ಡಾ.ಕೆ. ಅರುಣ್ ತಿಳಿಸಿದ್ದಾರೆ.
ಇದನ್ನೂ ಓದಿ:ಕಾರ್ಕಳ ಯುವತಿ ಅತ್ಯಾಚಾರ ಹೇಯ ಕೃತ್ಯ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ - Karkala Girl Rape Case