ಬೆಂಗಳೂರು: ದೇಶದ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ಕೊಟ್ಟು, ತಾವು ಸ್ಥಾಪಿಸಿದ ಎಲ್ಲ ಉದ್ಯಮಗಳಲ್ಲೂ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ ಬದುಕಿನ ಪಾಠ ಕಲಿಸಿದ ರಾಮೋಜಿ ರಾವ್ ಅವರು ನಿಜವಾದ 'ಭಾರತ ರತ್ನ' ಎಂದು ನ್ಯೂಸ್ ಫಸ್ಟ್ ಕನ್ನಡ ವಾಹಿನಿ ಸಿಇಒ ರವಿಕುಮಾರ್ ಹೇಳಿದರು.
ಇತ್ತೀಚೆಗೆ ಇಹಲೋಕ ತ್ಯಜಿಸಿದ ಮಾಧ್ಯಮ ರಂಗದ ಹಿರಿಯರಾದ ರಾಮೋಜಿ ರಾವ್ ಹಾಗೂ ಮತ್ತಿಹಳ್ಳಿ ಮದನ ಮೋಹನ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.
''ರಾಮೋಜಿ ರಾವ್ ಅವರಲ್ಲಿದ್ದ ಹಠ, ಛಲ, ಅರ್ಪಣಾ ಮನೋಭಾವದ ಧ್ಯೇಯಗಳು ನನ್ನನ್ನು ಆಕರ್ಷಿಸಿದವು. ಅದನ್ನು ಇಂದಿಗೂ ನಾನು ಪಾಲಿಸುತ್ತಿದ್ದೇನೆ. 'ಪ್ರಿಯ' ಉಪ್ಪಿನಕಾಯಿ ಉದ್ಯಮದಿಂದ ಮಾಧ್ಯಮವರೆಗೂ ಎಲ್ಲ ಉದ್ಯಮಗಳಲ್ಲೂ ಅವರು ಯಶಸ್ಸು ಸಾಧಿಸಿದವರು. ಅವರ ಯೋಜನೆಗಳು ಹಾಗೂ ಯೋಚನಾ ಲಹರಿ ನನ್ನನ್ನು ಮಂತ್ರಮುಗ್ಧವಾಗಿಸಿದೆ. ನನ್ನಂತಹ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ ಬದುಕು ರೂಪಿಸಿದರು'' ಎಂದು ಸ್ಮರಿಸಿದರು.
ವಯಸ್ಸು, ಅನುಭವವಲ್ಲ; ಉತ್ಸಾಹಿಗಳಿಗೆ ಮನ್ನಣೆ: ''ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಬೇಕೆಂಬ ಹಂಬಲದೊಂದಿಗೆ ನಾನು ಹೈದರಾಬಾದ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 'ಈಟಿವಿ' ತೆಲುಗು ವಾಹಿನಿಯಲ್ಲಿ ಕೆಲಸಕ್ಕೆ ಸೇರಿ ತರಬೇತಿ ಪಡೆದುಕೊಂಡೆ. ಇದಾದ ಮೂರು ವರ್ಷಗಳಲ್ಲಿ ಆರಂಭವಾದ 'ಈಟಿವಿ' ಕನ್ನಡ ವಾಹಿನಿಯಲ್ಲಿ ನನಗೆ ರಾಮೋಜಿ ರಾವ್ ಅವರು ಕೆಲಸ ನೀಡಿದರು. ಬಳಿಕ ಗುಜರಾತಿ, ಮಧ್ಯಪ್ರದೇಶ ಡೆಸ್ಕ್ ತರಬೇತಿಯನ್ನು ನನ್ನಿಂದ ಕೊಡಿಸಿದರು. 'ಈಟಿವಿ' ಸಂಸ್ಥೆಯಲ್ಲಿ 7 ಏಳು ವರ್ಷಗಳ ಕೆಲಸ ಮಾಡಿ ಅನುಭವ ಪಡೆದುಕೊಂಡೆ. ರಾಮೋಜಿ ರಾವ್ ಅವರು ಎಂದಿಗೂ ವಯಸ್ಸು, ಅನುಭವ ನೋಡುತ್ತಿರಲಿಲ್ಲ. ಕೆಲಸ ಮಾಡುವ ಸಾಮರ್ಥ್ಯ ಹಾಗೂ ಉತ್ಸಾಹವಿದ್ದವರಿಗೆ ಮಾತ್ರ ಕೆಲಸ ನೀಡುತ್ತಿದ್ದರು'' ಎಂದು ರವಿಕುಮಾರ್ ಮೆಲುಕು ಹಾಕಿದರು.
''ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎದ್ದು 'ಈನಾಡು' ಪತ್ರಿಕೆ ಓದುತ್ತಿದ್ದ ಅವರು ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದಿ ಎಲ್ಲಿಲ್ಲಿ ಯಾವ ಸುದ್ದಿ ಎಲ್ಲಿ ಬರಬೇಕು, ತಪ್ಪಾಗಿರುವ ಬಗ್ಗೆ ಮಾರ್ಕ್ ಮಾಡಿ ಕಳುಹಿಸುತ್ತಿದ್ದರು. ಇದು ಅವರಲ್ಲಿದ್ದ ಬದ್ಧತೆಯನ್ನು ತೋರಿಸುತ್ತಿತ್ತು. ರಾಮೋಜಿ ರಾವ್ ದೇಶದ 13 ವಾಹಿನಿಗಳನ್ನು ಒಬ್ಬರೇ ನಿರ್ವಹಿಸುತಿದ್ದರು. ಜನರು ಸುದ್ಧಿ ನೋಡಿ ಮತ್ತೆ, ಮತ್ತೆ ನಮ್ಮ ವಾಹಿನಿ ನೋಡಲು ಬರಬೇಕು. ಈ ಮೂಲಕ ಲಾಯಲ್ ವ್ಯೂವರ್‌ಶಿಪ್ ಇರಬೇಕು. ಯಾವುದೇ ಪ್ರಮೋಷನ್ ಇಲ್ಲದೇ ನಮ್ಮ ವಾಹಿನಿ ನೋಡುವಂತಾಗಬೇಕು. ಎಂಟರ್ಟೈನ್ಮೆಂಟ್ಗಿಂತ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು'' ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.