ಬಬಲೇಶ್ವರ(ವಿಜಯಪುರ): ವಿಕಸಿತ ಭಾರತದ ಸಂಕಲ್ಪ ತೊಟ್ಟಿರುವ ಸಮರ್ಥ ನಾಯಕ ನರೇಂದ್ರ ಮೋದಿ ಮೂರನೇ ಬಾರಿ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಅವರು ಮತ್ತೆ ಪ್ರಧಾನಿಯಾಗಲು ಸಂಸತ್ನಲ್ಲಿ ನಾನು ಅವರ ಪರವಾಗಿ ಮತ್ತೆ ಕೈ ಎತ್ತಬೇಕೆಂಬುದು ನನ್ನ ಕೊನೆಯ ಆಸೆ ಎಂದು ಸಂಸದ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದ ಎನ್ಡಿಎ ಮೈತ್ರಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅಭಿಲಾಷೆ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣಾ ಪ್ರಚಾರಾರ್ಥ ಇಂದು ಬಬಲೇಶ್ವರ ಮತಕ್ಷೇತ್ರದ ಮಮದಾಪುರ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ರಕ್ಷಣೆ ಮತ್ತು ಉಳಿವಿಗಾಗಿ ಈ ಹಿಂದೆ ಎರಡು ಬಾರಿ ಮೋದಿಯವರ ಪರವಾಗಿ ಕೈ ಎತ್ತಲು ವಿಜಯಪುರ ಜನ ನನಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಇನ್ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಮೋದಿಯವರನ್ನು ಮೂರನೇ ಸಲ ಪ್ರಧಾನಿ ಮಾಡಲು ನಾನು ಈ ಬಾರಿಯೂ ಕೈ ಎತ್ತಬೇಕು ಎಂಬುದು ನನ್ನ ಕೊನೆಯ ಆಸೆ. ಹಾಗಾಗಿ ಈ ಬಾರಿಯೂ ವಿಜಯಪುರ ಜನತೆ ನನಗೆ ಆಶೀರ್ವದಿಸಬೇಕೆಂಬುದು ನನ್ನ ಪ್ರಾರ್ಥನೆ. ಪ್ರಧಾನಿಯಾಗಲು ಉತ್ಕೃಷ್ಠ ವ್ಯಕ್ತಿತ್ವ ಹೊಂದಿರುವ ಸಮರ್ಥ ನಾಯಕನಾಗಿರಬೇಕು. ಕಾಂಗ್ರೆಸ್ನವರು ಪಪ್ಪು ಎಂದು ಕರೆಯುವ ಹುಡುಗನನ್ನು ದೇಶದ ಪ್ರಧಾನಿ ಮಾಡಲು ಹೊರಟಿದ್ದಾರೆ. ಇಂತಹ ವ್ಯಕ್ತಿಯನ್ನು ಜನ ಒಪ್ಪಲು ಸಾಧ್ಯವೇ ಎಂದು ಜಿಗಜಿಣಗಿ ಪ್ರಶ್ನಿಸಿದರು.