ಬೆಂಗಳೂರು :ರಾಮನಗರಕ್ಕೆ ರಾಮನ ಬ್ರ್ಯಾಂಡ್ ಇದೆ, ಬೆಂಗಳೂರು ಬ್ರ್ಯಾಂಡ್ ಅಗತ್ಯ ಇಲ್ಲ. ರಾಮನಗರ ಜಿಲ್ಲೆ ಹೆಸರು ಬದಲಾವಣೆಯನ್ನು ಯಾರೂ ಒಪ್ಪಲ್ಲ. ಬಿಜೆಪಿ ಯಾವ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡಲ್ಲ. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಜಿಲ್ಲೆಯ ಹೆಸರು ಬದಲಾವಣೆ ವಿರುದ್ಧ ಹೋರಾಟ ಮಾಡಲಿವೆ ಎಂದು ಮಾಜಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ. ಕೆ ಶಿವಕುಮಾರ್ ಹಾಗೂ ಅವರ ರಾಮನಗರ ಮುಖಂಡರ ತಂಡ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಕೋರಿಕೆಯನ್ನು ಯಾರೂ ಒಪ್ಪುವಂಥದ್ದಲ್ಲ. ರಾಮನಗರ ಬೆಂಗಳೂರಿಗೆ ಸೇರಿಸಿಕೊಳ್ಳಿ ಅನ್ನುವ ಮನವಿ ಕೊಟ್ಟಿದ್ದಾರೆ. ಅವರ ಭಾವನೆಗಳನ್ನು ಯಾರೂ ಒಪ್ಪುವುದಕ್ಕೆ ಆಗಲ್ಲ. ಹೆಸರು ಬದಲಾವಣೆಗೆ ರಿಯಲ್ ಎಸ್ಟೇಟ್ ಕಾರಣ ಕೊಟ್ಟಿದ್ದಾರೆ. ಒಬ್ಬ ಆಡಳಿತಗಾರ ಕೊಡುವ ಕಾರಣನಾ ಇದು. ರಾಮನಗರದಲ್ಲಿ ಯಾವ ಅಭಿವೃದ್ಧಿ ಮಾಡದೇ ಆ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಅವರು ಆ ಜಿಲ್ಲೆಗೆ ಏನೂ ಮಾಡದೇ ಕೇವಲ ರಾಜಕೀಯ ಉದ್ದೇಶಕ್ಕಾಗಿ ಜಿಲ್ಲೆಯ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ರಾಮನಗರದಲ್ಲಿ ಏನೂ ಕೆಲಸ ಮಾಡಿಲ್ಲ. ಹೆಸರು ಬದಲಾವಣೆ ಮಾಡಿಕೊಂಡೇ ಆಟ ಆಡುತ್ತೇನೆ ಅನ್ನುವ ಮನೋಭಾವ ಡಿ. ಕೆ ಶಿವಕುಮಾರ್ ಅವರಲ್ಲಿ ಇದೆ. ರಾಮನಗರಕ್ಕೆ ರಾಮನ ಹೆಸರಿದೆ, ರಾಮನ ಹೆಸರೇ ಬದಲಾಯಿಸಲು ಹೊರಟಿದ್ದಾರೆ. ನಾಮಕರಣ ಮಾಡೋದೇ ಸಾಧನೆ ಅಂದುಕೊಂಡಿದ್ದಾರೆ. ಈ ಮೂಲಕ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದಾರೆ. ರಾಮನಗರದಲ್ಲಿ ಅವರಿಗೆ ಸಾವಿರಾರು ಎಕರೆ ಜಮೀನಿದೆ. ಹಣಕ್ಕಾಗಿ ಈಗ ಏನು ಬೇಕಾದರೂ ಮಾಡುತ್ತೇನೆ ಅಂತ ಹೊರಟಿದ್ದಾರೆ. ಹಣ ಸಿಗುತ್ತದೆ ಅಂತ ಅಪ್ಪ ಇಟ್ಟ ಹೆಸರನ್ನೂ ಬೇಕಾದರೂ ಬದಲಾಯಿಸಿಕೊಳ್ತಾರೆ. ಡಿ ಕೆ ಶಿವಕುಮಾರ್ ಅವರಿಗೆ ಭ್ರಷ್ಟಾಚಾರ, ಹಣ ಮಾಡೋದು ಬಿಟ್ಟು ಬೇರೇನೂ ಬರಲ್ಲ ಎಂದು ವಾಗ್ದಾಳಿ ನಡೆಸಿದರು.
ಹೆಸರು ಬದಲಾವಣೆಗೆ ಜನ ಒಪ್ಪಲ್ಲ:ರಾಮನಗರ ಜಿಲ್ಲೆಯ ಹೆಸರು ಬದಲಾಯಿಸಲು ರಾಜ್ಯದ ಜನ, ರಾಮನಗರದ ಜನ ಒಪ್ಪಲ್ಲ. ಈ ಕೆಲಸ ಆಗಲು ನಾವು ಬಿಡಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ದಿಕ್ಕು ತಪ್ಪಿಸಲು ರಾಮನಗರ ವಿಚಾರ ತೆಗೆದುಕೊಂಡು ಬಂದಿದ್ದಾರೆ. ರಾಮನಗರದ ಜನರೇ ಡಿ. ಕೆ ಶಿವಕುಮಾರ್ ಅವರ ಈ ನಡೆ ವಿರೋಧಿಸಲು, ಪ್ರತಿಭಟಿಸಲು ರೆಡಿಯಾಗಿದ್ದಾರೆ. ನಾವೂ ಕೂಡಾ ಹೋರಾಟ ನಡೆಸುತ್ತೇವೆ. ಕುಮಾರಸ್ವಾಮಿ ಅವರು ಈ ವಿಚಾರದಲ್ಲೂ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ. ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳೂ ಪ್ರಬಲವಾಗಿ ವಿರೋಧಿಸುವ ಕೆಲಸ ಮಾಡುತ್ತೇವೆ ಎಂದರು.