ಚಾಮರಾಜನಗರ:ಸೋಮವಾರ (ಜ.22)ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದು, ಗಡಿಜಿಲ್ಲೆ ಚಾಮರಾಜನಗರದಲ್ಲೂ ಕೂಡ ರಾಮ ಸಂಚಾರ ನಡೆಸಿದ ಹಲವು ಸ್ಥಳಗಳಿವೆ. ವನವಾಸದ ಸಂದರ್ಭದಲ್ಲಿ ಚಾಮರಾಜನಗರದ ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದರ ಬಗ್ಗೆ ಪ್ರತೀತಿ, ಪುರಾಣಗಳಲ್ಲಿ ಉಲ್ಲೇಖವಿದೆ.
ರಾಮನ ಪಾದವೇ ಮಂದಿರವಾಗಿ, ದೇವರ ಹೆಜ್ಜೆ ಗುರುತನ್ನು ಶ್ರದ್ಧಾ ಭಕ್ತಿಯಿಂದ ನಿತ್ಯ ಪೂಜಿಸುವ ಸ್ಥಳವೊಂದಿದೆ. ಇಲ್ಲಿ ಪಾದದ ಗುರುತಿಗೆ ನಮಸ್ಕರಿಸಿ ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಸಲಿದೆ ಎಂಬ ನಂಬಿಕೆ ಭಕ್ತರದ್ದು. ತಮಿಳುನಾಡಿನ ತಾಳವಾಡಿ ತಾಲೂಕಿನ ರಾಮಪುರ ಸಮೀಪದ ಅರಣ್ಯದ ನಡುವೆ ರಾಮರಪಾದ ಎಂಬ ದೇಗುಲವಿದೆ. ವನವಾಸ ಸಮಯದಲ್ಲಿ ಶ್ರೀರಾಮ ಒಂದು ದಿನ ಇಲ್ಲಿ ಬಂದು ತಂಗಿದ್ದು, ಹೊರಡುವ ವೇಳೆ ಎದುರಾದ 'ತಲ' ಎಂಬ ರಾಕ್ಷಸನನ್ನು ಸಂಹರಿಸಲು ಹೂಡಿದ ಬಾಣ ಆತನ ತಲೆಯನ್ನು ಹಾದು ಹೋಗುವಾಗ ಅಡ್ಡ ಸಿಕ್ಕ ಬೆಟ್ಟವನ್ನು ಸೀಳಿದೆ ಎನ್ನುವುದು ಭಕ್ತರ ನಂಬಿಕೆ.
ಪುರಾಣದಲ್ಲಿ ಉಲ್ಲೇಖವಾದಂತೆ ಇಲ್ಲಿನ ಬೆಟ್ಟದ ಮಧ್ಯದ ಭಾಗ ಕತ್ತರಿಸಿದಂತಿದೆ. ಬಿಲ್ಲು ಹೂಡುವಾಗ ನೆಲಕ್ಕೆ ಮಂಡಿಯೂರಿದ ಕುರುಹಾಗಿ ಇಂದಿಗೂ ಅಲ್ಲಿ ಕಪ್ಪು ಶಿಲೆಯೊಂದರಲ್ಲಿ ಕುಳಿ ಬಿದ್ದಿದೆ. ಈ ಕುಳಿಯನ್ನು ರಾಮನ ಪಾದವೆಂದು ನಿತ್ಯ ಅಗ್ರಪೂಜೆ ಸಲ್ಲಿಸಲಾಗುತ್ತದೆ. ಶನಿವಾರ ಮತ್ತು ವಿಶೇಷ ದಿನಗಳಲ್ಲಿ ಇಲ್ಲಿ ನಡೆಯುವ ಪೂಜೆಗೆ ವಿವಿಧ ಭಾಗಗಳಿಂದ ರಾಮ ಭಕ್ತರು ಆಗಮಿಸುತ್ತಾರೆ. ವಿಶೇಷವೆಂದರೆ, ರಾಮ- ಸೀತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ ಕಾರ್ಯ ಸಿದ್ದಿಗಾಗಿ ಬೇಡಿದರೆ ಆತ ಇಷ್ಟಾರ್ಥ ಸಿದ್ಧಿಸುತ್ತಾನೆ ಎನ್ನುವುದು ನಂಬಿಕೆ. ಮಕ್ಕಳಾಗದೆ ಇರುವವರು ಕೂಡ ಇಲ್ಲಿಗೆ ಬಂದು ಸಂತಾನ ಭಾಗ್ಯಕ್ಕಾಗಿ ಬೇಡಿಕೊಳ್ಳುತ್ತಾರೆ ಎನ್ನುತ್ತಾರೆ ಭಕ್ತರು.