ಹುಬ್ಬಳ್ಳಿ:ದೇಶಾದ್ಯಂತ ರಾಮಲಲ್ಲಾನ ಜಪ ಮುಂದುವರೆದಿದೆ. ಪ್ರಭು ಶ್ರೀರಾಮನ ಭಕ್ತರು ವಿವಿಧ ರೀತಿಯಲ್ಲಿ ತಮ್ಮ ಭಕ್ತಿ ಸಮರ್ಪಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಹವ್ಯಾಸಿ ನಾಣ್ಯ ಹಾಗು ನೋಟು ಸಂಗ್ರಹಕಾರರು ವಿಶೇಷ ರಾಮ ಮಂದಿರ ರಚಿಸಿ ಗಮನ ಸೆಳೆದಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಬಸವೇಶರ ನಗರದ ಸುನೀಲ್ ಕಮ್ಮಾರ ಎಂಬವರೇ ನಾಣ್ಯಗಳಲ್ಲಿ ದೇವಾಲಯ ರಚಿಸಿದವರು. ಜ.22ರಂದು ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ 15 ವರ್ಷಗಳ ಹಿಂದಿನ ನಾಣ್ಯಗಳನ್ನು ಬಳಸಿ ಮನೆಯಲ್ಲಿ ಮಂದಿರ ರಚಿಸಿ ಭಕ್ತಿ ಮೆರೆದಿದ್ದಾರೆ.
ಇದಕ್ಕೂ ಮುನ್ನ ಎರಡು ಬಾರಿ ಮಂದಿರ ರಚಿಸಲು ಯತ್ನಿಸಿ ಇವರು ವಿಫಲರಾಗಿದ್ದರು. ಆದರೆ ಛಲ ಬಿಡದೆ ಮೂರನೇ ಬಾರಿಗೆ ಜೈ ಶ್ರೀರಾಮ ಘೋಷಣೆಯೊಂದಿಗೆ ನಾಣ್ಯ ಹಾಗೂ ನೋಟುಗಳನ್ನು ಜೋಡಿಸುತ್ತಾ ಸುಂದರ ಮಂದಿರ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಐದೂವರೆ ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಸಾರ್ವಜನಿಕರಿಗೆ ನಾಳೆಯವರೆಗೆ ಇದನ್ನು ನೋಡುವ ಅವಕಾಶ ಮಾಡಿಕೊಟ್ಟಿದ್ದಾರೆ. "ನಾವು ಅಯೋಧ್ಯೆಗೆ ಹೋಗಿ ಮಂದಿರ ನೋಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಲ್ಲಿಯೇ ನಿರ್ಮಾಣ ಮಾಡಿದ್ದೇನೆ" ಎಂದು ಸುನೀಲ್ ಹೇಳಿದರು.