ಬಾಗಲಕೋಟೆ:ತಮ್ಮ 17ನೇ ವರ್ಷ ದಲ್ಲಿ ಆರ್ಎಸ್ಎಸ್ ಸೇರಿ, ಬಿಜೆಪಿ ಪಕ್ಷ ನಿಷ್ಠೆ ಹಾಗೂ ಹಿಂದುತ್ವಕ್ಕೆ ಒತ್ತು ಕೊಟ್ಟಿರುವ ನಾರಾಯಣಸಾ ಭಾಂಡೆಗೆ ಅವರಿಗೆ ರಾಜ್ಯಸಭೆ ಟಿಕೆಟ್ ಲಭಿಸಿದೆ. ಕೆಳಮಟ್ಟದ ಕಾರ್ಯಕರ್ತರನ್ನು ಪಕ್ಷ ಗುರುತಿಸಿ ಅವಕಾಶ ನೀಡಿದೆ. ಇವರು ಕಳೆದ 40 ವರ್ಷಗಳಿಂದ ಆರ್ಎಸ್ಎಸ್ ಸಂಘಟನೆ ಮತ್ತು ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡುತ್ತಾ, ವಿವಿಧ ಹುದ್ದೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಪಕ್ಷದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಬಿಜೆಪಿಯಲ್ಲಿ ನಾರಾಯಣಸಾ ಭಾಂಡೆಗೆ ನಡೆದು ಬಂದ ದಾರಿ:ಬಾಗಲಕೋಟೆ ಜಿಲ್ಲೆಯಲ್ಲಿ ಎಬಿವಿಪಿ ಶಾಖೆಯನ್ನು ಹುಟ್ಟು ಹಾಕಿ, ಆರು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ್ದರು. ವಿಶ್ವ ಹಿಂದೂ ಪರಿಷತ್ ಪ್ರಭಾರಿ ಆಗಿ, ಉಡುಪಿ ವಿಶ್ವೇಶ್ವರ ಪೇಜಾವರ ಶ್ರೀಗಳೊಂದಿಗೆ ಪ್ರವಾಹ ಸಂದರ್ಭದಲ್ಲಿ ಸಂಚಾರ ಮಾಡಿ, ಪ್ರವಾಹ ಪೀಡಿತ ಜನರಿಗೆ ಧವಸ ಧ್ಯಾನ ಹಾಗೂ ಇತರ ವಸ್ತುಗಳ ಹಂಚಿಕೆ ಮಾಡಿದ್ದರು. ಅಲ್ಲದೇ, 1973 ರಿಂದ ಜನ ಸಂಘದಿಂದಲೂ ರಾಜಕೀಯಕ್ಕೆ ಬಂದ ಭಾಂಡೆಗೆ ಅವರು, ಆಲಮಟ್ಟಿ ಆಣೆಕಟ್ಟಿಗೆ ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಭೇಟಿ ನೀಡಿದಾಗ ಇವರು ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಪೊಲೀಸ್ ಲಾಠಿ ಚಾರ್ಜ್ನಿಂದ ಗಾಯವಾಗಿ 18 ದಿನ ಜೈಲಿನಲ್ಲಿ ಇದ್ದರು. ತುರ್ತು ಪರಿಸ್ಥಿತಿ ಹಾಗೂ ಅಯೋಧ್ಯೆಗೆ ನೂರು ಕರ ಸೇವಕರನ್ನು ಕರೆದುಕೊಂಡು ಹೋಗುತ್ತಿರುವಾಗ ಜೈಲು ಸೇರಿದ್ದರು. ಕಾಶ್ಮೀರದಲ್ಲಿ ನಡೆದ ತಿರಂಗಾ ಯಾತ್ರೆ ಸಮಯದಲ್ಲಿ 60 ಜನ ಕಾರ್ಯಕರ್ತರನ್ನು ಹೋರಾಟದಲ್ಲಿ ಕರೆದುಕೊಂಡು ಹೋಗಿ ಯಶಸ್ವಿಗೊಳಿಸಿದ್ದರು.