ಮೈಸೂರು :ಬರಗಾಲದಿಂದ ರಾಜ್ಯದ ರೈತರು ಮತ್ತು ಜಾನುವಾರುಗಳು ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ.ಈ ಬಾರಿ ರಾಜ್ಯ ಬಜೆಟ್ನಲ್ಲಿ ರೈತ ಸಮುದಾಯದ ನಿರೀಕ್ಷೆಗಳೇನು ಎಂಬ ಬಗ್ಗೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಈಟಿವಿ ಭಾರತ್ನೊಂದಿಗೆ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ಆದಾಯ ಖಾತ್ರಿ ಯೋಜನೆಗಳನ್ನು ಜಾರಿಗೊಳಿಸಬೇಕು, ರೈತರ ಮಕ್ಕಳಿಗೆ ಕನ್ಯೆಯರು ಸಿಗುತ್ತಿಲ್ಲ. ಇಂತಹ ಸಾಮಾಜಿಕ ಸಮಸ್ಯೆಗೆ ಪ್ರೋತ್ಸಾಹ ಧನ ನೀಡಬೇಕು. ಜೊತೆಗೆ ಉದ್ಯೋಗ ಸೃಷ್ಟಿಯ ಯೋಜನೆಗಳನ್ನು ಹಾಗೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ. ಅವರ ಸಂದರ್ಶನದ ಭಾಗ ಇಲ್ಲಿದೆ.
ಸರ್ಕಾರ ಹಾಗೂ ವಿಶೇಷವಾಗಿ ಮುಖ್ಯಮಂತ್ರಿಗಳು ಕರ್ನಾಟಕದ ಅಭಿವೃದ್ಧಿಗೆ 10 ವರ್ಷದ ಮಾದರಿಗಳನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. 10 ವರ್ಷದ ಮಾದರಿ ಎಂದರೆ ಈ ಅವಧಿಯಲ್ಲಿ ಏನು ಅಭಿವೃದ್ಧಿ ಸಾಧಿಸುತ್ತೇವೆ ಎಂದರ್ಥ. ಇವತ್ತು ಕೃಷಿಕ ಸಮುದಾಯ ಬಹಳ ಸಂಕಷ್ಟದಲ್ಲಿದೆ. ಮಿನಿಮಮ್ ಗ್ಯಾರಂಟಿ ಆದಾಯ ಇಲ್ಲದಿರುವ ವರ್ಗ ಅಂದರೆ ಅದು ರೈತಾಪಿ ವರ್ಗ. ಕನಿಷ್ಠ ಆದಾಯ ಖಾತ್ರಿ ಇಲ್ಲ. ಆದಾಯ ಖಾತ್ರಿಯನ್ನು ಕೊಡುವಂತಹ ಬಜೆಟ್ ಮಂಡನೆ ಮಾಡಬೇಕು. ಐದು ಗ್ಯಾರಂಟಿ ಯೋಜನೆಗಳನ್ನು ನಾವು ಸ್ವಾಗತ ಮಾಡಿದ್ದೇವೆ. ಆರ್ಥಿಕ ಪರಿಸ್ಥಿತಿ ಹಳ್ಳಿಗಳಲ್ಲಿ ಕಷ್ಟ ಇತ್ತು. ಕನಿಷ್ಠ ಒಂದು ಟಾನಿಕ್ ಕೊಟ್ಟಂತೆ ಆಗಿದೆ. ಇದು ತಾತ್ಕಾಲಿಕ ಅಷ್ಟೇ. ಪರ್ಮನೆಂಟ್ ಆಗಿ ಸ್ವಾಭಿಮಾನದಿಂದ ಅವರಿಗೆ ಬದುಕನ್ನು ನಡೆಸುವಂತಹ ಆರ್ಥಿಕ ನೀತಿಯನ್ನು ಕಲ್ಪಿಸಬೇಕು ಎಂದಿದ್ದಾರೆ ಬಡಗಲಪುರ ನಾಗೇಂದ್ರ.
ಹೆಣ್ಣು ಮಕ್ಕಳಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು : 10ನೇ ತಾರೀಖು ರೈತ ನಾಯಕ ನಂಜುಂಡಸ್ವಾಮಿಯವರ ನೆನಪಿನ ದಿನ. ಅವರನ್ನು ನೆನೆದುಕೊಳ್ಳುತ್ತ ಮುಖ್ಯಮಂತ್ರಿ ಅವರನ್ನು ಅಲ್ಲಿಗೆ ಕರೆದು ಅವರ ಮುಂದೆ ನಮ್ಮ ಹಕ್ಕೊತ್ತಾಯವನ್ನು ಮಾಡುತ್ತೇವೆ. ಮುಖ್ಯಮಂತ್ರಿ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ, ಹಕ್ಕೊತ್ತಾಯವನ್ನ ಸ್ವೀಕಾರ ಮಾಡುತ್ತಾರೆ. ಇವತ್ತಿನ ದಿನಗಳಲ್ಲಿ ಯುವ ರೈತರಿಗೆ ಕನ್ಯೆಯರನ್ನು ಯಾರೂ ಕೊಡುತ್ತಿಲ್ಲ. ಇದೊಂದು ಸಾಮಾಜಿಕ ಕಳಂಕ ಮತ್ತು ಸಮಸ್ಯೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳಿಲ್ಲ. ನಗರಗಳಲ್ಲಿ ಸೌಲಭ್ಯಗಳು ಇವೆ. ಸರಿಯಾದ ವಿದ್ಯುತ್, ನೀರು ಇಲ್ಲ. ಗ್ರಾಮೀಣ ಭಾಗದಲ್ಲಿ ಬದುಕುವವರಿಗೆ ಆರ್ಥಿಕ ಭದ್ರತೆಯೂ ಇಲ್ಲ ಎಂದರು. ಯುವ ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ 5 ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ಸರ್ಕಾರ ಘೋಷಣೆ ಮಾಡಬೇಕು. ಆ ಕುಟುಂಬ ಕೃಷಿ ಆಧಾರಿತ ಉದ್ಯಮ ಮಾಡುತ್ತಿದ್ದರೆ 25 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಕೊಡಿಸಬೇಕು. ಅದಕ್ಕೆ ಸರ್ಕಾರವೇ ಭದ್ರತೆ ನೀಡಬೇಕು ಎಂದು ರೈತ ನಾಯಕ ಒತ್ತಾಯಿಸಿದ್ದಾರೆ.
ಅಕ್ಕಿ ಬದಲು ಪ್ರದೇಶಕ್ಕೆ ತಕ್ಕಂತೆ ಆಹಾರ ಧಾನ್ಯಗಳನ್ನು ನೀಡಬೇಕು: ಪಡಿತರ ಸಿಕ್ತಾ ಇದೆ. ಕೇಂದ್ರ ಸರ್ಕಾರ ಕೇವಲ 5 ಕೆಜಿ ನೀಡುತ್ತಿದೆ. ಇವತ್ತಿನ ದಿನ ಭತ್ತ ಸಿಗುತ್ತಿಲ್ಲ. 10 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಇನ್ನೂ 5 ಕೆಜಿ ಅಕ್ಕಿ ಹಣವನ್ನು ಡಿಬಿಟಿ ಮಾಡುತ್ತಿದ್ದಾರೆ. ಕುಟುಂಬಕ್ಕೆ ಹಣ ನೀಡುವುದರ ಬದಲಿಗೆ ಎರಡು ಕೆಜಿ ರಾಗಿ ಕೊಡಿ. ಒಂದು ಕೆಜಿ ತೊಗರಿ ಬೇಳೆ, ಒಂದು ಕೆಜಿ ಕಡಲೆಕಾಯಿ ಎಣ್ಣೆ ಕೊಡಿ. ಜೋಳ ಬೆಳೆಯುವ ಪ್ರದೇಶದಲ್ಲಿ ಜೋಳ ಕೊಡಿ. ಈ ತರಹ ಮಾಡಬೇಕು ಎಂದು ನಾವು ಒತ್ತಾಯ ಮಾಡುತ್ತೇವೆ. ಇದನ್ನು ಪರಿಣಿತರ ಜೊತೆ ಚರ್ಚೆ ಮಾಡಿ, ಜಾರಿಗೆ ತರಬೇಕು ಎಂದರು. ಬರ ಅನ್ನೋದು ಈಗ ಶಾಶ್ವತವಾಗುತ್ತಿದೆ. ಕಳೆದ ವರ್ಷ ಮತ್ತು ಈ ವರ್ಷ ಸಹ ಬರ ಬಂದಿದೆ. ಇಡೀ ದೇಶದಲ್ಲಿ 36 ಪರ್ಸೆಂಟ್ ಬರ ಕರ್ನಾಟಕ ರಾಜ್ಯದಲ್ಲಿದೆ ಎಂದು ಬಡಗಲಪುರ ನಾಗೇಂದ್ರ ಅವರು ವಿವರಿಸಿದರು.