ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಭಾರೀ ಪ್ರಮಾಣದಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ನಗರದಲ್ಲಿಯೂ ಹಗುರ ಮಳೆಯಾಗುತ್ತಿದೆ. ರಾಜಧಾನಿಯಲ್ಲಿ ಸತತ 2ನೇ ದಿನವೂ ಜಿಟಿಜಿಟಿ ಮಳೆ ಸುರಿದಿದೆ. ಶೀತಗಾಳಿ ಬೀಸುತ್ತಿದೆ. ತೇವಾಂಶ ಭರಿತ ಮೋಡಗಳಿರುವುದು ಹಾಗೂ ನಿರಂತರ ಮಳೆಯಿಂದಾಗಿ ನಗರದಲ್ಲಿ ತಂಪು ವಾತಾವರಣ ಕಾಣಿಸಿಕೊಳ್ಳುತ್ತಿದೆ. ಇಡೀ ದಿನ ಮೋಡ ಮುಸುಕಿದ ವಾತಾವರಣ ಉಂಟಾದ ಪರಿಣಾಮ ಜನರಿಗೆ ಮಲೆನಾಡಿನ ವಾತಾವರಣದ ಅನುಭವವಾಗಿದ್ದು, ಇದರಿಂದಾಗಿ ಬೆಚ್ಚಗಿನ ಉಡುಪುಗಳ ಮೊರೆಗೆ ಹೋಗುವಂತಾಗಿದೆ.
ಯಲಹಂಕ, ಪೂರ್ವ, ಪಶ್ಚಿಮ, ದಕ್ಷಿಣ, ರಾಜರಾಜೇಶ್ವರಿ ನಗರ ವಲಯ ಸೇರಿ ನಗರಾದ್ಯಂತ ಮಳೆಯಾಯಿತು. ಕೋರಮಂಗಲ, ಮಡಿವಾಳ, ವಿಲ್ಸನ್ ಗಾರ್ಡನ್, ಡೇರಿ ಸರ್ಕಲ್, ಜಕ್ಕೂರು, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ದಯಾನಂದನಗರ, ಜಯನಗರ, ಜೆ.ಪಿ.ನಗರ, ಬಸವನಗುಡಿ, ಕತ್ತರಿಗುಪ್ಪೆ, ಇಟ್ಟಮಡು, ನಾಯಂಡಹಳ್ಳಿ, ಮೈಸೂರು ರಸ್ತೆ, ಕೆಂಗೇರಿ, ವಿಜಯನಗರ, ಮಲ್ಲೇಶ್ವರ, ಯಶವಂತಪುರ, ಪೀಣ್ಯ, ಜಾಲಹಳ್ಳಿ ಕ್ರಾಸ್, ಹೆಬ್ಬಾಳ, ಯಲಹಂಕ ಸೇರಿ ನಗರದ ಹಲವು ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಕೆಲವೆಡೆ ಮಾತ್ರ ಧಾರಾಕಾರವಾಗಿ ವರ್ಷಧಾರೆಯಾಗುತ್ತಿದೆ.