ಬೆಂಗಳೂರು:ಸಿಲಿಕಾನ್ ಸಿಟಿಯ ಹಲವೆಡೆ ಶುಕ್ರವಾರ ಮಧ್ಯಾಹ್ನ ಕೆಲಕಾಲ ಗಾಳಿಸಹಿತ ಮಳೆಯಾಯಿತು. ಕೆ.ಆರ್.ಸರ್ಕಲ್, ಕೆ.ಆರ್.ಮಾರ್ಕೆಟ್, ವಸಂತನಗರ, ಮೆಜೆಸ್ಟಿಕ್, ವೈಟ್ ಫೀಲ್ಡ್, ಕಾಡುಗೋಡಿ, ರಾಜಾಜಿನಗರ, ರೇಸ್ ಕೋರ್ಸ್ ರಸ್ತೆ, ಪ್ಯಾಲೇಸ್ ರಸ್ತೆ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.
ಉದ್ಯಾನನಗರಿಯ ಜನರು ಮಳೆಯಲ್ಲಿ ಸಂಭ್ರಮದಿಂದ ಮಿಂದೆದ್ದರು. ವಾಹನ ಸವಾರರು ಕೂಡ ನೆನೆದುಕೊಂಡೇ ಸಾಗಿದರು. ಹಲವೆಡೆ ರಸ್ತೆಯಲ್ಲಿ ನೀರು ನಿಂತು ಕೆಲಕಾಲ ಟ್ರಾಫಿಕ್ ಜಾಮ್ ಸಹ ಉಂಟಾಯಿತು.
ರಾಜ್ಯದಲ್ಲಿ ಮಳೆ ಮುನ್ಸೂಚನೆ:ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಬೆಂಗಳೂರು ನಗರದಲ್ಲಿ 17.2 ಮಿಲಿ ಮೀಟರ್ ಮಳೆ ಸುರಿದಿದೆ. ಈ ಸಮಯದಲ್ಲಿ 23.4 ಡಿಗ್ರಿ ತಾಪಮಾನ ದಾಖಲಾಗಿದೆ. ಅಲ್ಲದೆ, ಮಂಡ್ಯ, ಮೈಸೂರು, ಕೊಡಗು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಕೂಡ ಮಳೆ ಸುರಿದಿದೆ. ಮುಂದಿನ 3 ಗಂಟೆಗಳಲ್ಲಿ ಮತ್ತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೊಡಗು, ಹಾಸನ, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.