ರಾಯಚೂರು:ಈಗಾಗಲೇ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅಭ್ಯರ್ಥಿಗಳು ಮತಬೇಟೆ ಆರಂಭಿಸಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕ ಸ್ಪರ್ಧಿಸಲಿದ್ದಾರೆ.
ರಾಯಚೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಎನ್ನುವ ಕೂತೂಹಲವಿತ್ತು. ಅಲ್ಲದೇ ಈಗ ಘೋಷಿಸಿದ ಅಭ್ಯರ್ಥಿಯೂ ಸೇರಿದಂತೆ ಜಿಲ್ಲೆಯ ಮುಖಂಡರು ಪೈಪೋಟಿ ನಡೆಸಿದ್ದರು. ಆದರೆ ಪಕ್ಷ ನಿನ್ನೆ ಕ್ಷೇತ್ರದ ಟಿಕೆಟ್ ಅಂತಿಮಗೊಳಿಸಿತು.
ಕಳೆದ ಚುನಾವಣೆಯಲ್ಲಿ ಪರಾಭವಗೊಂಡ ಬಿ.ವಿ.ನಾಯಕ ಬಿಜೆಪಿ ಸೇರ್ಪಡೆಯಾದ ಪರಿಣಾಮ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಡುತ್ತಿದ್ದ ಕಾಂಗ್ರೆಸ್ ನಾಯಕರು ಹೊಸಬರಿಗೆ ಮಣೆ ಹಾಕಿದ್ದಾರೆ. ಪಕ್ಷದಲ್ಲಿ ಪ್ರಬಲ ಆಕಾಂಕ್ಷಿಗಳಿದ್ದರೂ ಸಹ ಹೊಸ ಪ್ರಯತ್ನಕ್ಕೆ ಪಕ್ಷ ಮುಂದಾಗಿದೆ.
ಜಿ.ಕುಮಾರ ನಾಯಕ ರಾಜಕೀಯವಾಗಿ ಜಿಲ್ಲೆಗೆ ಪರಿಚಯವಿಲ್ಲದೇ ಇದ್ದರೂ ಸರ್ಕಾರಿ ಅಧಿಕಾರಿಯಾಗಿ ಜಿಲ್ಲೆಯೊಂದಿಗೆ ಹಳೇ ನಂಟು ಹೊಂದಿದ್ದಾರೆ. ಇವರ ಮೂಲ ಬೆಂಗಳೂರು. ಪ್ರಸ್ತುತ ಅಲ್ಲಿಯೇ ವಾಸವಿದ್ದಾರೆ. ಪತ್ನಿ ಶೀಲಾಕುಮಾರಿ ಕೂಡ ನಿವೃತ್ತ ಬ್ಯಾಂಕ್ ನೌಕರರು. ಮಗಳು ಕಾನೂನು ಪದವೀಧರೆ. ಕುಮಾರ ನಾಯಕ ಅವರು ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ ಮುಂದೆ ಸರ್ಕಾರಿ ಹುದ್ದೆ ಸೇರಿಕೊಂಡರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಉನ್ನತ ಶಿಕ್ಷಣ ಇಲಾಖೆ, ಇಂಧನ ಶಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ನಂತರ ವಾಣಿಜ್ಯ ಮತ್ತು ಕೈಗಾರಿಕೆ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಕೆಪಿಸಿಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಸೇರಿದಂತೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಮುಖ್ಯವಾಗಿ, 1999ರಿಂದ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಇವರು ಈಚೆಗೆ ರಾಯಚೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹೀಗೆ ಜಿಲ್ಲೆಯ ಆಡಳಿತದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ ಜಿ.ಕುಮಾರ ನಾಯಕ.
ಇದನ್ನೂ ಓದಿ:ದಾವಣಗೆರೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ.ವಿನಯ್ ಕುಮಾರ್ ಅಸಮಾಧಾನ - G B Vinay Kumar