ಕರ್ನಾಟಕ

karnataka

ETV Bharat / state

ರೇಟ್ ಕಾರ್ಡ್ ಜಾಹೀರಾತು ಪ್ರಕರಣ: ನಾಳೆ ಕೋರ್ಟ್​ಗೆ ಹಾಜರಾಗಲಿರುವ ರಾಹುಲ್ ಗಾಂಧಿ - Rate Card Advertisement

ರೇಟ್​ ಕಾರ್ಡ್​ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನಾಳೆ ಕೋರ್ಟ್‌ಗೆ ಹಾಜರಾಗಲಿದ್ದಾರೆ.

rahul-gandhi
ರಾಹುಲ್ ಗಾಂಧಿ (ETV Bharat)

By ETV Bharat Karnataka Team

Published : Jun 6, 2024, 10:27 PM IST

ಬೆಂಗಳೂರು:ಮಾನನಷ್ಟ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಳೆ ಬೆಳಗ್ಗೆ 10.30ಕ್ಕೆ ಕಾವೇರಿ ಭವನ ಹಿಂಭಾಗದ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಪಕ್ಷವು ವಿವಿಧ ಪತ್ರಿಕೆಗಳಲ್ಲಿ ಹಾಕಿದ್ದ ರೇಟ್ ಕಾರ್ಡ್ ಜಾಹೀರಾತು ಸಂಬಂಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಕೇಶವ ಪ್ರಸಾದ್ ಮೇ 8, 2023ರಂದು 42ನೇ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ಈ ಸಂಬಂಧ ರಾಹುಲ್ ಗಾಂಧಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ವಾರ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿಶೇಷ ಕೋರ್ಟ್ ಮುಂದೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ. ಆದರೆ, ರಾಹುಲ್ ಗಾಂಧಿಗೆ ಸಮನ್ಸ್ ಜಾರಿಯಾಗಿದ್ದರೂ ಕೋರ್ಟ್ ಮುಂದೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಅಂದು ವಿಶೇಷ ನ್ಯಾಯಾಲಯ ಜೂ.7ಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸುವಂತೆ ನಿರ್ದೇಶನ ನೀಡಿತ್ತು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ ಪತ್ರಿಕಾ ಜಾಹೀರಾತಿನಲ್ಲಿ ಬಿಜೆಪಿ ಸರ್ಕಾರ 2019ರಿಂದ 2023ರವರೆಗೆ ಭ್ರಷ್ಟ ಆಡಳಿತ ನೀಡಿದೆ. ಸಿಎಂ ಹುದ್ದೆಗೆ- 2,500 ಕೋಟಿ, ಮಂತ್ರಿಗಳ ಹುದ್ದೆಗೆ- 500 ಕೋಟಿ ರೂಗಳನ್ನು ಹೈಕಮಾಂಡ್​ಗೆ ನೀಡಿದೆ ಎಂದು ಆರೋಪಿಸಿತ್ತು.

ಇದಲ್ಲದೆ ಕೋವಿಡ್ ಕಿಟ್ ಪೂರೈಕೆ ಟೆಂಡರ್​ನ ಡೀಲ್​ಗಳಲ್ಲಿ ಶೇಕಡಾ 75, ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್​ನ ಡೀಲ್‌ಗಳಲ್ಲಿ ಶೇಕಡಾ 40, ಮಠಕ್ಕೆ ನೀಡುವ ಅನುದಾನದ ಡೀಲ್​ಗಳಲ್ಲಿ ಶೇಕಡಾ 30, ಉಪಕರಣಗಳ ಪೂರೈಕೆ ಡೀಲ್‌ಗಳಲ್ಲಿ ಶೇಕಡಾ 40, ಮಕ್ಕಳಿಗೆ ನೀಡುವ ಮೊಟ್ಟೆ ಪೂರೈಕೆಯ ಟೆಂಡರ್​ನ ಡೀಲ್​ಗಳಲ್ಲಿ ಶೇಕಡಾ 30 ಮತ್ತು ರಸ್ತೆ ಕಾಮಗಾರಿಗಳ ಟೆಂಡರ್​ನ ಡೀಲ್​​ಗಳಲ್ಲಿ ಶೇಕಡಾ 40 ಮೊತ್ತದ ಶೇಕಡಾವಾರು ಕಮಿಷನ್ ಅನ್ನು ಟೆಂಡರ್​ದಾರರಿಂದ ಪಡೆದು ಭ್ರಷ್ಟ ಆಡಳಿತ ನೀಡಿರುವ ಆರೋಪ ಮಾಡಿ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿತ್ತು.

ಇದು ಚುನಾವಣಾ ಸಮಯದಲ್ಲಿ ಬಿಜೆಪಿಗೆ ಮಾಡಿರುವ ಅಪಮಾನ. ಆದ್ದರಿಂದ ಕಾಂಗ್ರೆಸ್ ಮುಖಂಡರುಗಳ ವಿರುದ್ಧ ಐಪಿಸಿ ಕಲಂ 499, 500 ಪ್ರಕಾರ ಮಾನನಷ್ಟ ಮೊಕದ್ದಮೆಯ ಖಾಸಗಿ ದೂರು ದಾಖಲು ಮಾಡಿಕೊಳ್ಳುವಂತೆ ಎಸ್.ಕೇಶವ ಪ್ರಸಾದ್ 8.05.2023ರಂದು 42ನೇ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.

ವಿಜೇತ ಸಂಸದರ ಜೊತೆ ಸಭೆ: ಕೋರ್ಟ್​ಗೆ ಹಾಜರಾದ ಬಳಿಕ ರಾಹುಲ್ ಗಾಂಧಿ, ಬೆಳಗ್ಗೆ 11.30ಕ್ಕೆ ಕ್ವೀನ್ಸ್ ರಸ್ತೆಯ ಭಾರತ್ ಜೋಡೋ ಭವನದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ವಿಜೇತ ಹಾಗೂ ಪರಾಜಿತ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ:ಬಿಜೆಪಿ ವಿರುದ್ದ ಮಾನಹಾನಿಕರ ಜಾಹೀರಾತು: ಖುದ್ದು ಹಾಜರಿಯಿಂದ ವಿನಾಯತಿ ನೀಡಿದ ನ್ಯಾಯಾಲಯ - Defamatory Advertisement Case

ABOUT THE AUTHOR

...view details