ದಾವಣಗೆರೆ :ಯುವಜನೋತ್ಸವಕ್ಕೆ ಆಗಮಿಸಿದ್ದ ಯುವ ಮನಸುಗಳಿಗೆ ಕುಂದುವಾಡ ಕೆರೆಯಲ್ಲಿ ರಾಫ್ಟಿಂಗ್, ಬೋಟಿಂಗ್, ಅಡ್ವೆಂಚರ್ ತರಬೇತಿ ನೀಡಲಾಯಿತು. ಕರ್ನಾಟಕದಲ್ಲಿ ಜರುಗಿದ ಯುವಜನೋತ್ಸವ ಕಾರ್ಯಕ್ರಮಗಳಲ್ಲಿ ಎಲ್ಲೂ ಆಯೋಜನೆ ಮಾಡದ ರಾಫ್ಟಿಂಗ್ ತರಬೇತಿ ಇತಿಹಾಸದಲ್ಲೇ ಮೊದಲ ಬಾರಿಗೆ ದಾವಣಗೆರೆಯ ಯುವಜನೋತ್ಸವದಲ್ಲಿ ಆಯೋಜನೆ ಮಾಡಲಾಗಿತ್ತು.
ನಗರದ ಕುಂದುವಾಡ ಕೆರೆಯಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ರಾಫ್ಟಿಂಗ್ ಹಾಗೂ ಬೋಟಿಂಗ್ ಸ್ಕಿಲ್ ಬಗ್ಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಯುವಕ ಯುವತಿಯರು ಸಾಕಷ್ಟು ಜನ ಭಾಗಿಯಾಗಿ ಬೋಟಿಂಗ್ ಮಾಡಿ ಈಜು ಪಟುಗಳು, ಮುಳುಗು ತಜ್ಞರ ಬಳಿ ತರಬೇತಿ ಪಡೆದರು.
ರಾಫ್ಟಿಂಗ್ ತರಬೇತಿ ಪಡೆದ ವಿದ್ಯಾರ್ಥಿನಿ ವಿಂದ್ಯಾ ಹಾಗೂ ವಿದ್ಯಾರ್ಥಿ ವರುಣ್ ಆರ್ಯ ಮಾತನಾಡಿದರು (ETV Bharat) ಗಾಳಿ ತುಂಬಿದ ಎರಡು ಬೋಟ್ಗಳು ವಿದ್ಯಾರ್ಥಿಗಳನ್ನು ಹೊತ್ತು ಕುಂದವಾಡ ಕೆರೆ ಮಧ್ಯೆ ತೆರಳಿದವು. ಅಲ್ಲಿ ತರಬೇತಿದಾರರು ಬೋಟ್ ಹಾಗೂ ರಾಫ್ಟಿಂಗ್ ಬಗ್ಗೆ ತರಬೇತಿ ನೀಡಿದರು. ಕಲ್ಬುರ್ಗಿ, ಮೈಸೂರು, ರಾಯಚೂರು, ಚಿಕ್ಕಮಗಳೂರು, ಯಾದಗಿರಿ, ದಾವಣಗೆರೆ ಹಾಗೂ ನಾನಾ ಜಿಲ್ಲೆಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸಿ ತರಬೇತಿ ಪಡೆದುಕೊಂಡರು.
ಈ ಬಗ್ಗೆ ವಿದ್ಯಾರ್ಥಿನಿ ವಿಂದ್ಯಾ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ''ದಾಂಡೆಲಿಯಲ್ಲಿ ಮಾತ್ರ ರಾಫ್ಟಿಂಗ್ ಮಾಡಿದ್ದೇವೆ. ಇಂದು ರಾಫ್ಟಿಂಗ್ನಲ್ಲಿ ಹೇಗೆ ಮಾಡುತ್ತೇವೆ, ಅದನ್ನ ಏನೆನಕ್ಕೆ ಬಳಸುತ್ತೇವೆ. ಒಂದು ವೇಳೆ ಅದು ಪಂಚರ್ ಆದರೆ ನಾವು ಹೇಗೆ ಬಚಾವ್ ಆಗಿ ಬರಬೇಕು. ಅದನ್ನೆಲ್ಲಾ ತುಂಬಾ ಚೆನ್ನಾಗಿ ಅರ್ಥ ಮಾಡಿಸಿಕೊಟ್ಟರು. ಹೊಸದಾಗಿ ಕಲಿಯುತ್ತಿರುವ ಫೀಲಿಂಗ್ ಇದೆ. ಇಲ್ಲಿ ಎಂಜಾಯ್, ರಕ್ಷಣೆ, ತರಬೇತಿ ಹೀಗೆ ಮೂರು ವಿಧದಲ್ಲಿ ತರಬೇತಿ ನೀಡಿದರು. ಈ ತರಬೇತಿ ಕೊಟ್ಟಿದ್ದಕ್ಕಾಗಿ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದಗಳು'' ಎಂದು ಹೇಳಿದರು.
ರಾಫ್ಟಿಂಗ್ ತರಬೇತಿಯಲ್ಲಿ ಭಾಗವಹಿಸಿದ ಯುವಕ-ಯುವತಿಯರು (ETV Bharat) ರಕ್ಷಣೆಗೆ ಸಹಕಾರಿಯಾಗಲಿದೆ ಈ ತರಬೇತಿ : ''ಇತಿಹಾಸದಲ್ಲೇ ಮೊದಲ ಬಾರಿಗೆ ಯುವಜನೋತ್ಸವದಲ್ಲಿ ಅಡ್ವೆಂಚರ್ ಸ್ಪೋರ್ಟ್ಸ್, ರಿವರ್ ರಾಫ್ಟಿಂಗ್ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ. ಈ ತರಬೇತಿ ಮಸ್ತಿಗೆ ಅಲ್ಲ, ಬದಲಿಗೆ ಇದನ್ನು ಬಳಕೆ ಮಾಡಿ ಜನರನ್ನ ರಕ್ಷಣೆ ಮಾಡುವುದು ಹೇಗೆ, ಇದರ ಮೂಲಕ ಪ್ರವಾಹ ಪೀಡಿತರಿಗೆ ಯಾವ ರೀತಿ ಆಹಾರವನ್ನು ಸರಬರಾಜು ಮಾಡಲಾಗುತ್ತದೆ, ಪ್ರಾಣ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸವಿಸ್ತಾರವಾಗಿ ತಿಳಿ ಹೇಳಿದರು. ಇಲ್ಲಿ ಗೆದ್ದವರು ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಲಿದ್ದಾರೆ. ದೆಹಲಿಗೆ ತೆರಳಬಹುದಾಗಿದೆ. ರಾಫ್ಟಿಂಗ್ ಮಾಡುವ ಮುನ್ನ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕೆಂದು ವಿವರಿಸಲಾಯಿತು'' ಎಂದು ಚಿಕ್ಕಮಗಳೂರು ಮೂಲದ ವಿದ್ಯಾರ್ಥಿ ವರುಣ್ ಆರ್ಯ ತರಬೇತಿ ಬಗ್ಗೆ ಮಾಹಿತಿ ಹಂಚಿಕೊಂಡರು.
ರಾಫ್ಟಿಂಗ್ ತರಬೇತಿಯಲ್ಲಿ ಪಾಲ್ಗೊಂಡವರು (ETV Bharat) ತರಬೇತಿಯಲ್ಲಿ ನೀಡಿದ ಟ್ರಿಕ್ಸ್ಗಳೇನು?: ನೀರಿನಲ್ಲಿ ಮುಳುಗಿದಾಗ ರಕ್ಷಣೆ ಮಾಡುವುದು, ಬೋಟ್ ಮಗುಚಿ ಬಿದ್ದಾಗ ವಿದ್ಯಾರ್ಥಿಗಳು ಏನ್ ಮಾಡಬೇಕು, ಪ್ರವಾಹದ ಸಂದರ್ಭದಲ್ಲಿ ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ಬೋಟ್ ಗಾಳಿ ಹೋದಾಗ ಯಾವ ರೀತಿ ದಡ ಸೇರಬೇಕೆಂದು ತರಬೇತಿದಾರರು ವಿದ್ಯಾರ್ಥಿಗಳಿಗೆ ವಿವರಿಸಿ, ವಿಶೇಷವಾಗಿ ತರಬೇತಿ ನೀಡಿದರು.
ಇದನ್ನೂ ಓದಿ :ಸಾಹಸ ಪ್ರವಾಸೋದ್ಯಮ ಉತ್ತೇಜಿಸಲು ದೋಡಾದಲ್ಲಿ ವಾಟರ್ ರಾಫ್ಟಿಂಗ್ - ದೋಡಾದಲ್ಲಿ ವಾಟರ್ ರಾಫ್ಟಿಂಗ್