ಕರ್ನಾಟಕ

karnataka

ETV Bharat / state

ಹಾವೇರಿ: ತುಂಬಿದ ನದಿಯಲ್ಲಿ ಸಿದ್ಧಾರೂಢ ಮತ್ತು ಮಲ್ಲಿಕಾರ್ಜುನಸ್ವಾಮಿಗೆ ತೆಪ್ಪೋತ್ಸವ - teppotsava - TEPPOTSAVA

ಹಾವೇರಿ ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ಸಿದ್ಧಾರೂಢರ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವರ ತೆಪ್ಪೋತ್ಸವ ಸೋಮವಾರ ಜರುಗಿದೆ.

ತುಂಬಿದ ನದಿಯಲ್ಲಿ ಸಿದ್ಧಾರೂಢ ಮತ್ತು ಮಲ್ಲಿಕಾರ್ಜುನಸ್ವಾಮಿಗೆ ತೆಪ್ಪೋತ್ಸವ
ತುಂಬಿದ ನದಿಯಲ್ಲಿ ಸಿದ್ಧಾರೂಢ ಮತ್ತು ಮಲ್ಲಿಕಾರ್ಜುನಸ್ವಾಮಿಗೆ ತೆಪ್ಪೋತ್ಸವ (ETV Bharat)

By ETV Bharat Karnataka Team

Published : Aug 20, 2024, 1:08 PM IST

ತುಂಬಿದ ನದಿಯಲ್ಲಿ ಸಿದ್ಧಾರೂಢ ಮತ್ತು ಮಲ್ಲಿಕಾರ್ಜುನಸ್ವಾಮಿಗೆ ತೆಪ್ಪೋತ್ಸವ (ETV Bharat)

ಹಾವೇರಿ: ಸಾಮಾನ್ಯವಾಗಿ ಕೆರೆ ಹೊಂಡ ಪುಷ್ಕರಣೆಯಲ್ಲಿ ತೆಪ್ಪೋತ್ಸವ ಮಾಡುವುದನ್ನು ನೀವು ಕೇಳಿರುತ್ತೀರಿ, ನೋಡಿರುತ್ತೀರಿ. ತುಂಬಿದ ನದಿಯಲ್ಲಿ ನೀರಿನ ಸೆಳವಿನ ಮಧ್ಯೆ ತೆಪ್ಪೋತ್ಸವ ಆಚರಿಸುವುದನ್ನು ನೀವು ನೋಡಿರಲಿಕ್ಕಿಲ್ಲಾ. ಆದರೆ, ಹಾವೇರಿ ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ಕಳೆದ 104 ವರ್ಷಗಳಿಂದ ಗ್ರಾಮಸ್ಥರು ತುಂಬಿದ ನದಿಯಲ್ಲಿ ನೀರಿನ ಸೆಳವಿನ ಮದ್ಯ ತೆಪ್ಪೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ.

ಪ್ರತಿವರ್ಷ ನೂಲು ಹುಣ್ಣಿಮೆಯ ದಿನ ಈ ವಿಶಿಷ್ಟ ತೆಪ್ಪೋತ್ಸವ ನಡೆಸುತ್ತಾರೆ. ಸಿದ್ಧಾರೂಢರ ಮತ್ತು ಗ್ರಾಮದೇವರು ಮಲ್ಲಿಕಾರ್ಜುನಸ್ವಾಮಿ ಮೂರ್ತಿ ಇಟ್ಟು ನದಿಯಲ್ಲಿ ತೆಪ್ಪೋತ್ಸವ ಆಚರಿಸುತ್ತಾರೆ. ಪ್ರಸ್ತುತ ವರ್ಷದ ತೆಪ್ಪೋತ್ಸವ ಸೋಮವಾರ ಸಂಜೆ ನಡೆಯಿತು. ತೆಪ್ಪೋತ್ಸವಕ್ಕೂ ಮುನ್ನ ಮಲ್ಲಿಕಾರ್ಜುನಸ್ವಾಮಿ ಮೂರ್ತಿ ಮತ್ತು ಸಿದ್ಧಾರೂಢರ ಮೂರ್ತಿಯನ್ನು ತೆಪ್ಪದಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ ನಂತರ ತೆಪ್ಪವನ್ನು ವರದಾ ನದಿಯ ತಟಕ್ಕೆ ತರಲಾಯಿತು.

ತುಂಬಿದ ನದಿಯಲ್ಲಿ ಸಿದ್ಧಾರೂಢ ಮತ್ತು ಮಲ್ಲಿಕಾರ್ಜುನಸ್ವಾಮಿಗೆ ತೆಪ್ಪೋತ್ಸವ (ETV Bharat)

ಅಲ್ಲಿ ನಿರ್ಮಿಸಲಾಗಿದ್ದ ಮರದ ಕಟ್ಟಿಗೆಗಳ ಮೇಲೆ ತೆಪ್ಪ ಇಡಲಾಯಿತು. ಗ್ರಾಮಸ್ಥರು ಈಜುಗುಂಬಳಕಾಯಿ,ಟ್ಯೂಬ್ ಸೇರಿದಂತೆ ವಿವಿಧ ವಸ್ತುಗಳನ್ನು ಹಾಕಿಕೊಂಡು ನದಿಗೆ ಇಳಿದು ತೆಪ್ಪದ ಹಗ್ಗ ಜಗ್ಗಿದರು. ಕೋಣನತಂಬಗಿ ಗ್ರಾಮದ ಒಂದು ದಡದಿಂದ ಪಕ್ಕದ ನದಿನೀರಲಗಿ ಗ್ರಾಮದ ದಡಕ್ಕೆ ತೆಪ್ಪವನ್ನು ನದಿಯಲ್ಲಿ ಈಜಿಕೊಂಡು ಗ್ರಾಮಸ್ಥರು ಎಳೆದರು. ನಂತರ ನದಿನೀರಲಗಿ ಗ್ರಾಮಸ್ಥರು ನದಿ ದಡಕ್ಕೆ ತೆಪ್ಪೋತ್ಸವ ಬರುತ್ತಿದ್ದಂತೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿ ಪೂಜೆ ಸಲ್ಲಿಸಿದ ನಂತರ ತೆಪ್ಪವನ್ನು ಮರಳಿ ಕೋಣನತಂಬಗಿ ಗ್ರಾಮಕ್ಕೆ ತರಲಾಯಿತು.

ತೆಪ್ಪಕ್ಕೆ ತಳಿರು ತೋರಣ ಬಲೂನ್​ಗಳಿಂದ ಅಲಂಕಾರ ಮಾಡಲಾಗಿತ್ತು. ಈ ತೆಪ್ಪೋತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. ಸಿದ್ಧಾರೂಢರು ಈ ಗ್ರಾಮದ ಆರಾಧ್ಯದೈವ ಆಗಿದ್ದವರು. ಹುಬ್ಬಳ್ಳಿಯಲ್ಲಿ ನಡೆಯುವ ಸಿದ್ಧಾರೂಢರ ಮಠದ ಪುಷ್ಕರಣೆಯಲ್ಲಿ ನಡೆಯುವ ತೆಪ್ಪೋತ್ಸವಕ್ಕೆ ಈ ಗ್ರಾಮದಿಂದ ನೂರಾರು ಗ್ರಾಮಸ್ಥರು ಚಕ್ಕಡಿಯಲ್ಲಿ ಹೋಗುತ್ತಿದ್ದರು. ಒಂದು ವರ್ಷ ಈ ರೀತಿ ತೆಪ್ಪೋತ್ಸವಕ್ಕೆ ಹೋಗುವಾಗ ಮಳೆ ಗುಡುಗು ಸಿಡಿಲಿನ ಹೊಡೆತಕ್ಕೆ ಸಿಲುಕಿ ಗ್ರಾಮಸ್ಥರು ತುಂಬಾ ನಲುಗಿದ್ದರಂತೆ. ಇದನ್ನರಿತ ಸಿದ್ಧಾರೂಢರು ಗ್ರಾಮಸ್ಥರಿಗೆ ಇನ್ನುಮುಂದೆ ನೀವು ತೆಪ್ಪೋತ್ಸವಕ್ಕೆ ಹುಬ್ಬಳ್ಳಿಗೆ ಬರುವುದು ಬೇಡ, ನಿಮ್ಮ ಗ್ರಾಮದ ನದಿಯಲ್ಲಿ ಮಾಡಿ. ನಾನು ಒಂದು ದಿನ ನಿಮ್ಮ ಊರಿನಲ್ಲಿರುತ್ತೇನೆ ಎಂದರಂತೆ. ಅಂದಿನಿಂದ ಗ್ರಾಮಸ್ಥರು ಕೋಣನತಂಬಗಿ ಗ್ರಾಮದಲ್ಲಿಯೇ ತೆಪ್ಪೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಈ ತೆಪ್ಪೋತ್ಸವ ಆಚರಿಸುವ ಮೊದಲು 7 ದಿನಗಳ ಕಾಲ ಗ್ರಾಮದಲ್ಲಿ ಓಂ ನಮಃ ಶಿವಾಯ ಸಪ್ತಾ ಆಚರಿಸಲಾಗುತ್ತದೆ.

ಗ್ರಾಮಸ್ಥರು ಒಂದು ನಿಮಿಷ ಸಹ ವಿರಮಿಸದೆ ಭಜನೆ ಮಾಡುತ್ತಾರೆ. ಏಳು ದಿನದ ನಂತರ ಈ ವಿಶಿಷ್ಟ ತೆಪ್ಪೋತ್ಸವ ಆಚರಿಸುತ್ತಾರೆ. ಈ ತೆಪ್ಪೋತ್ಸವ ನೋಡಲು ಕೋಣನತಂಬಗಿ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿರುತ್ತಾರೆ. ಈ ವಿಶಿಷ್ಟ ಅಪರೂಪದ ತೆಪ್ಪೋತ್ಸವ ಕಣ್ತುಂಬಿಕೊಳ್ಳುವ ಭಕ್ತರು ಸಿದ್ಧಾರೂಢರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸಿದ್ಧಾರೂಢರು ಕೋಣನತಂಬಗಿ ಸೇರಿದಂತೆ ತಮ್ಮ ಭಕ್ತರ ಗ್ರಾಮಗಳನ್ನು ಕಾಯುತ್ತಾರೆ ಎಂಬ ನಂಬಿಕೆ ಇಲ್ಲಿ ಮನೆ ಮಾಡಿದೆ. ಸಿದ್ಧಾರೂಢರಿಗೆ ಹಣ್ಣುತೆಂಗಿನಕಾಯಿ ನೈವೇದ್ಯ ಹಿಡಿಯುವ ಭಕ್ತರು ತೆಪ್ಪೋತ್ಸವ ಮುಗಿದ ನಂತರ ತಮ್ಮ ಮನೆಗಳಿಗೆ ಗ್ರಾಮಗಳಿಗೆ ಮರಳುತ್ತಾರೆ. ಈ ತೆಪ್ಪೋತ್ಸವದಲ್ಲಿ ಹಿಂದು ಮುಸ್ಲಿಂರು ಸೇರಿದಂತೆ ವಿವಿಧ ಧರ್ಮದವರು ಪಾಲ್ಗೊಂಡು ಭಾವೈಕ್ಯತೆದ ಸಂದೇಶ ಸಾರುತ್ತಾರೆ.

ಇದನ್ನೂ ಓದಿ:ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಂಭ್ರಮ‌ - Raghavendra Swami

ABOUT THE AUTHOR

...view details