ಕರ್ನಾಟಕ

karnataka

ETV Bharat / state

"ಸಂಜೆ ಭೇಟಿ ಕೊಟ್ಟಿದ್ದ ಶಾಲೆ ಬೆಳಗ್ಗೆ ನಾಪತ್ತೆ": ವಯನಾಡು ದುರಂತದಲ್ಲಿ ಪಾರಾಗಿ ಬಂದ ಮಳವಳ್ಳಿಯ ರಾಧಾ ಕಣ್ಣೀರು - WAYANAD LANDSLIDES - WAYANAD LANDSLIDES

ಮಧ್ಯರಾತ್ರಿ 12.45ಕ್ಕೆ ಒಂದು ದೊಡ್ಡ ಶಬ್ಧ ಕೇಳಿಸಿತು. 12.50ರ ಹೊತ್ತಿಗೆ ಎಲ್ಲ ಮಾಯವಾಗ್ತಾ ಬಂತು. ಒಂದು ಊರಿಡೀ ಪ್ರವಾಹದಲ್ಲಿ ಕೊಚ್ಚಿಹೋಗಿದೆ ಎಂದು ದುರಂತದಲ್ಲಿ ಪಾರಾಗಿ ಬಂದ ರಾಜ್ಯದ ಮಹಿಳೆ ಕಣ್ಣೀರು ಹಾಕಿದರು.

survivor Radha
ದುರಂತದಲ್ಲಿ ಪಾರಾಗಿ ಬಂದ ರಾಧಾ (ETV Bharat)

By ETV Bharat Karnataka Team

Published : Aug 1, 2024, 1:52 PM IST

Updated : Aug 1, 2024, 2:55 PM IST

ಚಾಮರಾಜನಗರ: ಕೇರಳ ಮಹಾ ದುರಂತದಲ್ಲಿ ಪಾರಾಗಿ ಬಂದ ಮಳವಳ್ಳಿಯ ರಾಧಾ ಈಗಲೂ ಆ ಘಟನೆಯನ್ನು ನೆನೆದು ಬೆಚ್ಚಿ ಬೀಳುತ್ತಾರೆ, ಬಿಕ್ಕಳಿಸುತ್ತಾರೆ. ಮಗಳ ಶಾಲಾ ದಾಖಲಾತಿಗೆ ಸಮಸ್ಯೆ ಉಂಟಾದ್ದರಿಂದ ಮೂಲತಃ ಕೇರಳದವರಾದ ರಾಧಾ ಚೂರಲ್ ಮಲೆಗೆ ತೆರಳಿ ಮಹಾ ಪ್ರಳಯಕ್ಕೆ ಸಿಲುಕಿ ಬಚಾವ್ ಆಗಿ ಬಂದಿದ್ದಾರೆ‌. ಕತ್ತಿನ ತನಕ ಬಂದಿದ್ದ ನೀರಿನ ನಡುವೆ ಹಗ್ಗ ಹಿಡಿದು ಬೆಟ್ಟ ಏರಿ ಪಾರಾಗಿ ಬಂದಿದ್ದಾರೆ.

ದುರಂತದಲ್ಲಿ ಪಾರಾಗಿ ಬಂದ ರಾಧಾ (ETV Bharat)

ಕಣ್ಣೆದುರೇ ಮಹಾ ಪ್ರಳಯ ಕಂಡ ಇವರು ಅಕ್ಷರಶಃ 2 ದಿನ ನರಕದ ದೃಶ್ಯ ನೋಡಿ ಬಂದಿದ್ದಾರೆ. "ರಾತ್ರಿ ಶುರುವಾದ ಜೋರು ಮಳೆಯಿಂದ ಬಚಾವ್ ಆಗಲು ಬೆಟ್ಟ ಏರಿದ್ದೆವು. 10 ನಿಮಿಷದಲ್ಲೇ ಎಲ್ಲವೂ ನಾಶವಾಯಿತು. ಆಸ್ಪತ್ರೆ ಕಟ್ಟಡವೊಂದು ಬಿಟ್ಟರೇ ಏನೂ ಉಳಿದಿರಲಿಲ್ಲ. ನನ್ನ ಮಗಳ ಶಾಲಾ ದಾಖಲಾತಿಗಾಗಿ ಕೆಲವು ದಾಖಲೆಗಳನ್ನು ತರಲು ಬಂದಿದ್ದೆ, ಸಂಜೆ ಭೇಟಿ ಕೊಟ್ಟಿದ್ದ ಶಾಲೆ ಬೆಳಗ್ಗೆ ಹೊತ್ತಿಗೆ ಅದರ ಅವಶೇಷವೇ ಇರಲಿಲ್ಲ" ಎಂದು ಕಣ್ಣೀರು ಹಾಕಿದರು.

"ಕತ್ತಿನವೆರೆಗೆ ನೀರಿತ್ತು, ನೀರಿನ ನಡುವೆ ಹಗ್ಗ ಹಿಡಿದು, ಪ್ರವಾಹದಿಂದ ತಪ್ಪಿಸಿಕೊಂಡು ಹೋಗಿ ಗುಡ್ಡದ ಮೇಲೆ ಕೂತಿದ್ದೆವು. ಅಕ್ಕಪಕ್ಕದ ಅಣ್ಣನವರೆಲ್ಲ ಹಗ್ಗ ಹಿಡಿದು ಹೋಗಲು ಸಹಾಯ ಮಾಡಿದರು. ಗುಡ್ಡದ ಮೇಲೆ ಇದ್ದರೂ ಅದೊಂದು ರೀತಿ ನರಕವೇ ಆಗಿತ್ತು. ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯಾಹ್ನದವೆರೆಗೆ ಊಟ, ನೀರು, ನಿದ್ದೆ ಏನೂ ಇಲ್ಲ. ಅಲ್ಲಿ ಒಬ್ಬರಿಗೆ ಕೈ ಇಲ್ಲ, ತಲೆ ಇರಲಿಲ್ಲ. ಮನೆಯಲ್ಲಿ ಉಳಿದಿದ್ದ ಒಂದೇ ಗೋಡೆಯನ್ನು ಹಿಡಿದು ತಾಯಿ-ಮಗು ಬದುಕಿದ್ದರು. ಆ ದೃಶ್ಯ ನೋಡುವುದು ಯಾರಿಗೂ ಬೇಡ" ಎಂದರು‌.

"ಗುಡ್ಡದ ಮೇಲಿಂದ ಬರಲೂ ದಾರಿ ಇರಲಿಲ್ಲ. ಮಂಗಳವಾರ ಸಂಜೆ 5 ಮೇಲೆ ಪರಿಹಾರ ಕ್ಯಾಂಪ್​ಗೆ ಕರೆದುಕೊಂಡು ಬಂದರು. ನಾವಿದ್ದ ಮನೆಯ ಅಕ್ಕಪಕ್ಕದವರಲ್ಲಿ 15 ಜನ ಅಷ್ಟೇ ಬಚಾವಾಗಿದ್ದಾರೆ. ಉಳಿದವರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಈಗಾಗಲೇ ಸುಮಾರು ಮೃತದೇಹಗಳು ಸಿಕ್ಕಿವೆ. ಈಗಲೂ ಮೃತದೇಹಗಳು ಅವಶೇಷಗಳಡಿ ಸಿಗುತ್ತಲೇ ಇವೆ" ಎಂದು ಮಹಾ ಪ್ರಳಯದ ಭೀಕರತೆಯನ್ನು ವಿವರಿಸಿದರು.

"ಮಳೆ ಜಾಸ್ತಿಯಾಗಿ ಬರ್ತಿತ್ತು, ಹಾಗಾಗಿ ನಿದ್ದೆ ಬರಲಿಲ್ಲ. ನಾವು ಮನೆಯವರು ಹೊರಗಡೆ ಬಂದು ನೋಡಿದರೆ ಧಾರಾಕಾರವಾಗಿ ನೀರು ಹೋಗುತ್ತಿತ್ತು. ಸ್ವಲ್ಪ ಹೊತ್ತಲ್ಲೇ ಕುತ್ತಿಗೆವೆರೆಗೆ ನೀರು ಬಂತು. ಹೇಗಾದರೂ ಹೊರಗೆ ಹೋಗಿ ಬಚಾವಾಗಬೇಕು ಅನ್ನುವಷ್ಟರಲ್ಲಿ ಸುತ್ತ ನೀರಿತ್ತು. ಯಾವ ಕಡೆಗು ಹೋಗಲೂ ಸಾಧ್ಯವಾಗುತ್ತಿರಲಿಲ್ಲ. 12.45ಕ್ಕೆ ಒಂದು ದೊಡ್ಡ ಶಬ್ಧ ಕೇಳಿಸಿತು. 12.50ರ ಹೊತ್ತಿಗೆ ಎಲ್ಲ ಮಾಯವಾಗ್ತಾ ಬಂತು. ಒಂದು ಊರಿಡೀ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಅಲ್ಲೊಂದು ಆಸ್ಪತ್ರೆಯ ಕಟ್ಟಡ ಮಾತ್ರ ಉಳಿದಿದೆ." ಎಂದು ಹೇಳಿದರು.

"ಜಾತಿ ಪ್ರಮಾಣಪತ್ರದಲ್ಲಿ ಉಂಟಾಗಿರುವ ದೋಷ ಸರಿಪಡಿಸಿ, ನನ್ನ ಮಗಳಿಗೆ ಶಾಲಾ ದಾಖಲಾತಿ ಕೊಡಿಸಬೇಕು" ಎಂದು ರಾಧಾ ಮನವಿ ಮಾಡಿದ್ದಾರೆ‌. ಎರಡು ದಿನ‌ ತಾವು ಕಂಡ ನರಕದ ದೃಶ್ಯದಿಂದ ಇನ್ನೂ ಚೇತರಿಸಿಕೊಳ್ಳದ ರಾಧಾ ಸದ್ಯ ಗುಂಡ್ಲುಪೇಟೆ ತಾಲೂಕಿನ‌ ಕಲಿಗೌಡನಹಳ್ಳಿಯ ಸಂಬಂಧಿ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಇದನ್ನೂ ಓದಿ:ವಯನಾಡ್ ಭೂಕುಸಿತ; 22 ಮಕ್ಕಳು ಸೇರಿ 243 ಮಂದಿ ಸಾವು; ರಕ್ಷಣಾ ಕಾರ್ಯಕ್ಕೆ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸಿದ ಸೇನೆ - Wayanad landslides

Last Updated : Aug 1, 2024, 2:55 PM IST

ABOUT THE AUTHOR

...view details