ಬೆಂಗಳೂರು : ವಕ್ಫ್ ವಿಚಾರವಾಗಿ ಜನರು ದಂಗೆ ಏಳುವ ಪರಿಸ್ಥಿತಿ ಕರ್ನಾಟಕದಲ್ಲಿದೆ. ಆದರೆ, ಸಿಎಂ ಸಿದ್ದರಾಮಯ್ಯನವರು ಪಿಟೀಲು ಬಾರಿಸಿಕೊಂಡು ಕುಳಿತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ನಗರದ ಫ್ರೀಡಂಪಾರ್ಕ್ನಲ್ಲಿ ವಕ್ಫ್ ಬೋರ್ಡ್ನಿಂದ ರೈತರ ಜಮೀನು ಕಬಳಿಸುತ್ತಿರುವುದನ್ಮು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿದ್ದಾರೆ (ETV Bharat) ಈ ವೇಳೆ ಮಾತನಾಡಿದ ಅವರು, ರೈತರ ಜಮೀನು ಕಿತ್ತುಕೊಳ್ಳುವುದು ಕಾಂಗ್ರೆಸ್ ಸಚಿವರಿಗೆ ಸಣ್ಣ ವಿಚಾರ ಎನಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಏನೂ ಇಲ್ಲ ಎನ್ನುತ್ತಾರೆ, ಹಾಗಿದ್ದರೆ ಏನೂ ಇಲ್ಲದೇ ಹೋರಾಟಗಳು ನಡೆಯುತ್ತಿವೆಯೇ? ಮಠ, ಮಂದಿರಗಳ ಪ್ರಮುಖರೂ ಹೋರಾಟಕ್ಕೆ ಬಂದಿದ್ದಾರೆ. ಬಿಜೆಪಿಯಿಂದ, ರೈತರಿಂದ ಇವತ್ತು ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಸ್ಲಿಮರ ಓಲೈಕೆ ಮಾಡುತ್ತಾರೆ. ಡಿಜೆ ಹಳ್ಳಿ- ಕೆಜಿಹಳ್ಳಿ, ಹುಬ್ಬಳ್ಳಿ ಕೇಸ್ಗಳನ್ನು ವಾಪಸ್ ಪಡೆದಿದ್ದಾರೆ. ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸುವ ಲವ್ ಜಿಹಾದ್ ಎಂಬ ಹೀನ ಕಾರ್ಯಕ್ಕೆ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ. ಇವರು ಬಂದಾಗ ಇಂಥವು ಜಾಸ್ತಿ ಆಗುತ್ತದೆ. ನಾವು ಅಧಿಕಾರದಲ್ಲಿ ಇದ್ದಾಗ ಕರ್ನಾಟಕದಲ್ಲಿ ಒಬ್ಬ ನಕ್ಸಲ್ ಇರಲಿಲ್ಲ. ಈಗ ನಕ್ಸಲರ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.
ನಗರದ ಫ್ರೀಡಂಪಾರ್ಕ್ನಲ್ಲಿ ಬಿಜೆಪಿ ನಾಯಕರಿಂದ ಪ್ರತಿಭಟನೆ (ETV Bharat) ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಕ್ಸಲರಿಗೆ ಹಬ್ಬ; ಲವ್ ಜಿಹಾದ್ ಮಾಡುವವರಿಗೆ ಹಬ್ಬ. ಇದು ಲ್ಯಾಂಡ್ ಜಿಹಾದ್. ಲವ್ ಜಿಹಾದ್ ಆಯ್ತು; ಲ್ಯಾಂಡ್ ಜಿಹಾದ್ ಬಂತು ಎಂದು ಟೀಕಿಸಿದರು. ಶ್ರೀರಂಗಪಟ್ಟಣದಲ್ಲಿ 400 ವರ್ಷ ಹಳೆಯ ದೇವಸ್ಥಾನ ಇದೆ. ಅಲ್ಲಿ ಮುಸ್ಲಿಮರ ಮನೆ ಇಲ್ಲ, ಮಸೀದಿಯೂ ಇಲ್ಲ. ಆದರೆ, ಆ ದೇವಸ್ಥಾನದ ಪಹಣಿಯಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನಮ್ಮ ಆಸ್ತಿ, ನಮ್ಮ ಹಕ್ಕು ಘೋಷವಾಕ್ಯದಡಿ ಹೋರಾಟ ನಡೆಯುತ್ತಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಹೆಸರಿನಲ್ಲಿ ನಮ್ಮ ಜಯನಗರದ ಶಾಸಕರೂ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಉಪ ಮುಖ್ಯಮಂತ್ರಿ, ‘ತಗ್ಗಿ ಬಗ್ಗಿ ನಡೆಯಬೇಕು’ ಎಂದು ಪಾಳೇಗಾರಿಕೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ್ (ETV Bharat) 38 ಲಕ್ಷ ಎಕರೆ ಭೂಮಿ ವಕ್ಫ್ ಹೆಸರಿನಲ್ಲಿದೆ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, 'ಸ್ವಾತಂತ್ರ್ಯದ ನಂತರದ ಆರಂಭಿಕ ದಿನಗಳಲ್ಲಿ 10 ಸಾವಿರದಷ್ಟು ವಕ್ಫ್ ಆಸ್ತಿಗಳು ಇದ್ದವು. ಇದೀಗ ಸುಮಾರು 9.5 ಲಕ್ಷ ಆಸ್ತಿಗಳು, 38 ಲಕ್ಷ ಎಕರೆ ಭೂಮಿ ವಕ್ಫ್ ಹೆಸರಿನಲ್ಲಿದೆ. ಇದು ಆತಂಕ ತರುವ ವಿಚಾರ. ಕಾನೂನುಬಾಹಿರ ಕಾಯ್ದೆಗಳ ಮೂಲಕ ನಮ್ಮ ರೈತರ, ನಮ್ಮ ದೇವಸ್ಥಾನವನ್ನು, ಮಠ ಮಂದಿರಗಳನ್ನು ವಕ್ಫ್ ಎಂದು ಘೋಷಿಸುತ್ತಿರುವುದು ನಮ್ಮ ತಕರಾರಿಗೆ ಕಾರಣ' ಎಂದರು.
ಹಿಂದೂಗಳ ಸ್ಮಶಾನವನ್ನೂ ವಕ್ಫ್ಗೆ ಸೇರಿದ್ದು ಎನ್ನುತ್ತಿದ್ದಾರೆ: ವಿಧಾನಪರಿಷತ್ ಸದಸ್ಯ ಸಿ. ಟಿ ರವಿ ಮಾತನಾಡಿ, 'ಅಷ್ಟ ಮಠದ ಜಾಗವನ್ನೂ ವಕ್ಫ್ ಬೋರ್ಡಿಗೆ ಸೇರಿದ್ದು ಎನ್ನುತ್ತಾರೆ. ಆಳಂದ ತಾಲೂಕಿನಲ್ಲಿ ಸಿದ್ದರಾಮಯ್ಯ ಅವರ ಕುಲದೇವರಾದ ಬೀರಲಿಂಗೇಶ್ವರರ ಗುಡಿ, ಸಾವಿರಾರು ಎಕರೆ ರೈತರ ಜಮೀನು, ಹಿಂದೂಗಳ ಸ್ಮಶಾನವನ್ನೂ ವಕ್ಫ್ಗೆ ಸೇರಿದ್ದು ಎನ್ನುತ್ತಿದ್ದಾರೆ' ಎಂದು ಕಿಡಿಕಾರಿದರು.
ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್ ಅಶ್ವತ್ಥನಾರಾಯಣ್, ಸಂಸದ ಪಿ. ಸಿ ಮೋಹನ್, ಶಾಸಕ ಎಸ್. ಆರ್ ವಿಶ್ವನಾಥ್, ಮಾಜಿ ಸಚಿವ ಮತ್ತು ಶಾಸಕ ಎನ್. ಮುನಿರತ್ನ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ. ಕೆ ರಾಮಮೂರ್ತಿ, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ’ಜಮೀರ್ ಹಿಂದೂಗಳ, ರೈತರ ಆಸ್ತಿ ನುಂಗಲು ಮುಂದಾಗಿದ್ದಾನೆ’: ರೇಣುಕಾಚಾರ್ಯ ಆಕ್ರೋಶ