ಬೆಂಗಳೂರು :ರಾಜ್ಯದ ಕಾಂಗ್ರೆಸ್ ಸರ್ಕಾರವು ಬಿಜೆಪಿ ಶಾಸಕರಿಗೆ ಎಷ್ಟು ಅನುದಾನ ನೀಡಿದೆ? ಕಾಂಗ್ರೆಸ್ ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸವಾಲು ಹಾಕಿದ್ದಾರೆ.
ಇಂದು ರಾಜ್ಯಪಾಲರ ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಕಡಿಮೆ ಅನುದಾನ ಕುರಿತಂತೆ ಮಾತನಾಡುವ ಕಾಂಗ್ರೆಸ್ ಮುಖಂಡರು ತಮ್ಮ ಮನೆಯಲ್ಲಿ ಸತ್ತುಬಿದ್ದ ಹೆಗ್ಗಣವನ್ನು ಮೊದಲು ಆಚೆ ಬಿಸಾಡಲಿ. ಆಮೇಲೆ ಬೇರೆಯವರ ತಟ್ಟೆಯಲ್ಲಿ ಬಿದ್ದ ನೊಣವನ್ನು ಎತ್ತಿ ಆಚೆ ಹಾಕಬಹುದು ಎಂದರು. ತಾರತಮ್ಯ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿ. ಆಗ ಕೇಂದ್ರಕ್ಕೆ ನಾವು ನಿಯೋಗದಲ್ಲಿ ನಿಮ್ಮ ಜೊತೆ ಬರಲು ಸಿದ್ಧ ಎಂದು ತಿಳಿಸಿದರು.
ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ, ಕಲ್ಲೆಸೆದ ದೇಶದ್ರೋಹಿಗಳನ್ನು ಬೆಂಬಲಿಸುವ ಹಾಗೂ ಅವರ ಮೊಕದ್ದಮೆ ರದ್ದುಪಡಿಸುವ ಸರ್ಕಾರದ ನಿರ್ಧಾರದ ವಿರುದ್ಧದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಅವರು ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಚರ್ಚೆ ಮಾಡಿದ್ದು, ಹುಬ್ಬಳ್ಳಿಯಲ್ಲಿ ಶೀಘ್ರವೇ ದೊಡ್ಡ ಹೋರಾಟ ಮಾಡಲಿದ್ದೇವೆ. ಕೇಸು ರದ್ದತಿ ಸರಿಯಲ್ಲ ಎಂಬ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಈ ಸರ್ಕಾರ ವಜಾ ಮಾಡಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದಾಗಿ ವಿವರಿಸಿದರು. ದೇಶದ್ರೋಹಿಗಳ ವಿರುದ್ಧ ನಮ್ಮ ಸರ್ಕಾರ ಕೇಸುಗಳನ್ನು ಹಾಕಿತ್ತು. ಆದರೆ, ಕೋರ್ಟ್ನಲ್ಲಿ ಕೇಸು, ಎನ್‍ಐಎ ತನಿಖೆ ನಡೆಯುತ್ತಿರುವಾಗ ಪ್ರಕರಣ ರದ್ದತಿ ಕುರಿತು ಕ್ಯಾಬಿನೆಟ್‍ನಲ್ಲಿ ತೀರ್ಮಾನ ಮಾಡಿದ್ದಾರೆ. ಪ್ರತಿಭಟನೆಗಳು ಹೆಚ್ಚಾದ ಬಳಿಕ ನಿನ್ನೆ ಕೋರ್ಟ್ ಒಪ್ಪಿದರೆ ಮಾತ್ರ ಕೇಸು ಹಿಂಪಡೆಯುವುದಾಗಿ ಯೂ ಟರ್ನ್ ಹೊಡೆದಿದ್ದಾರೆ ಎಂದು ಟೀಕಿಸಿದರು. ಮೊದಲು ಕೋರ್ಟಿಗೆ ಅರ್ಜಿ ಹಾಕಬೇಕಿತ್ತು ಎಂದ ಅವರು, ಓಲೈಕೆ ಮಾಡಲು ಕೇಸ್ ವಾಪಸ್ ಪಡೆಯುವ ನಿರ್ಧಾರ ಮಾಡಿದ್ದಾರೆ ಎಂದು ಟೀಕಿಸಿದರು.