ಬೆಳಗಾವಿ: ಕಾಂಗ್ರೆಸ್‌ನವರಿಗೆ ಅಂಬೇಡ್ಕರ್ ಫೋಟೋ ಹಿಡಿಯುವ ಯಾವ ನೈತಿಕತೆ ಇದೆ?. ಅವರ ಫೋಟೋ ಹಿಡಿಯುವ ಯೋಗ್ಯತೆ ಇಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಸುವರ್ಣಸೌಧದಲ್ಲಿ ಇಂದು ಮಾತನಾಡಿದ ಅವರು, "ಬಾಣಂತಿಯರ ಮರಣ ಮೃದಂಗ ಬೆಳಗಾವಿಯಿಂದ ಬೆಂಗಳೂರುವರೆಗೆ ವ್ಯಾಪಿಸಿದೆ. ನಾವು ಆರೋಗ್ಯ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ. ಅವರ ಮೇಲೆ ಕ್ರಿಮಿಕಲ್ ಕೇಸ್ ಹಾಕುವಂತೆ ಒತ್ತಾಯಿಸಲು ಮುಂದಾಗಿದ್ದೆವು. ಇದು ಕಾಂಗ್ರೆಸ್‌ನವರಿಗೆ ಗೊತ್ತಾಗಿರಬೇಕು. ಮುಡಾ ಅಕ್ರಮದ ಬಗ್ಗೆ ನಿಲುವಳಿ ಸೂಚನೆ ನೋಟಿಸ್ ಕೊಟ್ಟಿದ್ದೇವೆ. ಏಕಾಏಕಿಯಾಗಿ ಡಿಕೆಶಿ ಚಿತಾವಣೆಯಿಂದ ಫೋಟೋ ರೆಡಿ ಮಾಡಿ ಬಂದಿದ್ದರು. ಆಡಳಿತ ಪಕ್ಷ ಸದನವನ್ನು ಸರಿಯಾಗಿ ನಡೆಸಿಕೊಂಡು ಹೋಗಬೇಕು. ಆದರೆ ಅವರೇ ಧರಣಿ ಮಾಡುತ್ತಾರೆ" ಎಂದು ಕಿಡಿಕಾರಿದರು.
"ಉ.ಕ ಚರ್ಚೆಗೆ ಉತ್ತರಿಸಬೇಕಿತ್ತು. ಯಾವಾಗ ಸದನ ನಡೆಸಬೇಕೋ, ಆಗ ಸದನ ನಡೆಸಲ್ಲ. ಅಂಬೇಡ್ಕರ್ ವಿಚಾರವಾಗಿ ಲೋಕಸಭೆಯಲ್ಲಿ ಅಮಿತ್ ಶಾ ಹೇಳಿಕೆ ಸಂಬಂಧ ಅಂಬೇಡ್ಕರ್ ಫೋಟೋ ಪ್ರದರ್ಶನ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ಸೋಲಿಸಿದ್ದರು. ಅವರು ಸೋತಾಗ ಸಂಭ್ರಮಿಸಿದ್ದರು. ಅಂಬೇಡ್ಕರ್ ತೀರಿಕೊಂಡಾಗ ಆರಡಿ ಮೂರಡಿ ಜಾಗ ಕೊಡದ ಪಾಪಿಗಳು ಕಾಂಗ್ರೆಸ್ನವರು. ಮನೆಹಾಳು ಕಾಂಗ್ರೆಸ್ನವರು. ನೆಹರೂಗೆ ಭಾರತ ರತ್ನ. ಅಂಬೇಡ್ಕರ್ಗೆ ಏಕೆ ಭಾರತ ರತ್ನ ಕೊಟ್ಟಿಲ್ಲ. ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ತೀರಿಕೊಂಡರೆ ಜಾಗ ಬರೆದುಕೊಡುತ್ತಾರೆ. ಕೊಲೆಗಡುಕ ಸರ್ಕಾರ ನಿಮ್ಮದು" ಎಂದು ವಾಗ್ದಾಳಿ ನಡೆಸಿದ್ದಾರೆ.
"ಸದನ ಹಾಳು ಮಾಡಲು ಕಾಂಗ್ರೆಸ್ ಕಾರಣ. ಇವರ ನಡೆಯನ್ನು ಬಿಜೆಪಿ ಖಂಡಿಸುತ್ತದೆ. ಅಮಿತ್ ಶಾ ಸ್ಪಷ್ಟೀಕರಣ ನೀಡಿದ್ದಾರೆ. ಸ್ಪೀಕರ್ ಈ ತರದ ನಡಾವಳಿಗಳಿಗೆ ಅವಕಾಶ ಕೊಡಬಾರದು. ರಾಜಕೀಯ ಏನಾದರು ಇದ್ದರೆ ಹೊರಗಡೆ ಮಾಡಲಿ. ಸದನದಲ್ಲಿ ಮಾಡುವುದು ಸರಿಯಲ್ಲ. ಅಮಿತ್ ಶಾ ಹೇಳಿಕೆ ಕೊಟ್ಟಿರುವುದು ಸದನದಲ್ಲಿ. ಅಲ್ಲಿ ಕಾಂಗ್ರೆಸ್ನವರು ಕಡ್ಲೆ ಕಾಯಿ ತಿನ್ನುತ್ತಾ ಇದ್ದರಾ" ಎಂದು ಪ್ರಶ್ನಿಸಿದರು.